ಬೆಂಗಳೂರು: 15 ಶಾಸಕರು ಮುಂಬೈ ಹೋಗಿದ್ದಕ್ಕೆ ವಿಶ್ವಾಸ ಮತಯಾಚನೆ ಮಾಡಿಸಲು ಬಿಜೆಪಿ ನಾಯಕರು ಆತುರ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಶಾಸಕ ಶಿವಲಿಂಗೇಗೌಡರು ಇಷ್ಟು ದಿನ ಬಿಜೆಪಿಯವರು ಮಾಡಿರುವ ಅಪಾದನೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಸ್ಪೀಕರ್ಗೆ ಒತ್ತಾಯಿಸಿದರು.
ಮುಂಬೈನಲ್ಲಿರುವ ಶಾಸಕರು ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಾಯಿಸಿಕೊಳ್ಳಬಹುದು ಎಂಬ ಭಯದಲ್ಲಿ ಬಿಜೆಪಿಯವರಿದ್ದಾರೆ. ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಒಂದೇ ಒಂದು ಮತಕ್ಕಾಗಿ 10ದಿನ ಸಮಯ ತೆಗೆದುಕೊಂಡಿತ್ತು. ಸರ್ಕಾರ ರಚನೆಯಾದ ಬಳಿಕ ಏನೇನು ನಡೆಯಿತು ಎಂಬುದು ಎಲ್ಲರಿಗೆ ಗೊತ್ತಿದೆ ಎಂದು ವಿವರಿಸಿದರು.
ಸದನದಲ್ಲಿ ಚರ್ಚೆ ವೇಳೆ ಮಾತನಾಡಿದ ಅವರು, ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ದೋಸ್ತಿ ಸರ್ಕಾರಕ್ಕೆ ಬೆಂಬಲ ನೀಡದಂತೆ ನೋಡಿಕೊಳ್ಳಬಹುದಿತ್ತು. ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಮುಂಬೈಗೆ ಏಕೆ ಕಳುಹಿಸಬೇಕಿತ್ತು. ಎದೆನೋವು ಬಂದು ಮದ್ರಾಸ್ನಿಂದ ಮುಂಬೈಗೆ ಹಾರಿದ್ದಾರಂತೆ. ಬೆಂಗಳೂರಿನಲ್ಲಿ ಆಸ್ಪತ್ರೆ ಇರಲಿಲ್ಲವೇ? ಹಾಗೆಯೇ ಮುಂಬೈನಲ್ಲಿರುವ ಶಾಸಕರಿಗೂ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂದು ಇನ್ನೂ ಉತ್ತಮವಾದ ಆಸ್ಪತ್ರೆಗಳಿಗೆ ಸೇರಿಸಬೇಕಾಗಿತ್ತು ಎಂದು ವ್ಯಂಗ್ಯವಾಡಿದರು.