ಬೆಂಗಳೂರು :ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಸಜ್ಜಾಗಿದೆ. ಮೂರೂ ಕ್ಷೇತ್ರಗಳ ಬಿಜೆಪಿ ಉಸ್ತುವಾರಿಗಳ ತಂಡ ಚುನಾವಣೆಗೆ ಸನ್ನದ್ಧವಾಗಿದ್ದು, ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್‌ನತ್ತ ಚಿತ್ತ ಹರಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿರುವ ಪ್ರತಾಪ್ ಗೌಡ ಪಾಟೀಲ್ಗೆ ಮಸ್ಕಿ ಕ್ಷೇತ್ರದ ಉಪ ಚುನಾವಣಾ ಟಿಕೆಟ್ ನೀಡುವುದು ಪಕ್ಕಾ ಆಗಿದೆ. ಬಸವಕಲ್ಯಾಣ ಕ್ಷೇತ್ರಕ್ಕೆ ಸಾಕಷ್ಟು ಚರ್ಚೆ ನಡೆಸಲಾಗುತ್ತಿದೆ. ಸಿಎಂ ಪುತ್ರ ವಿಜಯೇಂದ್ರ ಅವರ ಸ್ಪರ್ಧೆಯ ಬಗೆಗಿನ ಮಾತು ಪಕ್ಷದ ವಲಯದಲ್ಲಿ ಹರಿದಾಡುತ್ತಿದ್ದರೂ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಸದ್ಯ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ. ಬೆಳಗಾವಿ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಹೆಸರು ಕೇಳಿ ಬಂದಿತ್ತಾದರೂ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ದಿ.ಸುರೇಶ್ ಅಂಗಡಿ ಅಥವಾ ಕೋರೆ ಕುಟುಂಬ ಇಲ್ಲ ಶೆಟ್ಟರ್ ಅವರಿಗೇ ಟಿಕೆಟ್ ಕೊಡಬೇಕೋ ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಆಕಾಂಕ್ಷಿಗಳು..
ಬೆಳಗಾವಿ ಲೋಕಸಭೆ :
1.ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ
2.ರಮೇಶ್ ಕತ್ತಿ
3.ಭಾರತಿ ಮುಗ್ದಂ
4.ಪ್ರಭಾಕರ್ ಕೋರೆ
5.ಮಹಾಂತೇಶ್ ಕವಟಗಿಮಠ
ಮಸ್ಕಿ ವಿಧಾನಸಭಾ ಕ್ಷೇತ್ರ :
1.ಪ್ರತಾಪ್ ಗೌಡ ಪಾಟೀಲ್
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ :
1.ಎಂಜಿ ಮೂಳ್ಹೆ
2.ಶರಣು ಸಲಗಾರ್
3.ಮಲ್ಲಿಕಾರ್ಜುನ ಖೂಬಾ
ಉಸ್ತುವಾರಿಗಳು ಅಲರ್ಟ್ :ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಂಸದ ಭಗವಂತ ಖೂಬಾ, ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಶಾಸಕ ರಾಜ್‌ಕುಮಾರ್ ಪಾಟೀಲ್ ತೇಲ್ಕರ್, ಈಶ್ವರ ಸಿಂಗ್ ಠಾಕೂರ್, ಅಮರನಾಥ ಪಾಟೀಲ್ ಉಸ್ತುವಾರಿಗಳಾಗಿದ್ದಾರೆ.
ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಶ್ರೀರಾಮುಲು, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ನೇಮಿರಾಜ್ ನಾಯಕ್, ರಾಜುಗೌಡ, ಡಾ. ಶಿವರಾಜ್ ಪಾಟೀಲ್ ಉಸ್ತುವಾರಿಗಳಾಗಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಸಚಿವರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಮತ್ತು ಬಸವರಾಜ್ ಯಂಕಂಚಿ ಉಸ್ತುವಾರಿಗಳಾಗಿದ್ದು, ಮೂರೂ ಕ್ಷೇತ್ರದ ಉಸ್ತುವಾರಿಗಳು ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಲರ್ಟ್ ಆಗಿದ್ದಾರೆ.
ಇನ್ನು, ಆಕಾಂಕ್ಷಿಗಳು ಲಾಬಿ ಆರಂಭಿಸಲಿದ್ದು, ಸಿಎಂ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೂಲಕ ಹೈಕಮಾಂಡ್ ಗಮನ ಸೆಳೆಯುವ ಯತ್ನ ನಡೆಸಲಿದ್ದಾರೆ. ಸದ್ಯದಲ್ಲೇ ಬಿಜೆಪಿ ಕೋರ್ ಕಮಿಟಿ ಸಭೆ ಸೇರಲಿದೆ. ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್ಗೆ ಕಳುಹಿಸಿ ಕೊಡಲಿದೆ.
ಓದಿ:ಮೂರು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ: ಉಸ್ತುವಾರಿಗಳ ತಂಡ ರಚಿಸಿದ ಬಿಜೆಪಿ