ಬೆಂಗಳೂರು:ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಯನ್ನು ಕರ್ನಾಟಕದಲ್ಲಿ ಯಶಸ್ವಿಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ವಿಶೇಷ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ.
ಎಐಸಿಸಿ ಆಯೋಜಿಸಿರುವ ಈ ಯಾತ್ರೆ ಸೆ.7 ರಿಂದ ಆರಂಭವಾಗಲಿದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಯುತ್ತಿರುವ ಈ ಯಾತ್ರೆ ರಾಜ್ಯದಲ್ಲಿ 21 ದಿನ ನಡೆಯಲಿದೆ. ಒಟ್ಟು 12 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ನಡೆಯುವ ಯಾತ್ರೆಯ ಲೋಗೋ ಟ್ಯಾಗ್ ಲೈನ್ ಮತ್ತು ವೆಬ್ಸೈಟ್ನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿ 21 ದಿನ ಸಂಚಾರ:ಪಾದಯಾತ್ರೆಯ ಅಂತಿಮ ಮಾರ್ಗ ನಿಗದಿಯಾಗಿದೆ. ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ದೆಹಲಿ ಪಂಜಾಬ್, ಚಂಡಿಗಢ ಮತ್ತು ಜಮ್ಮು ಕಾಶ್ಮೀರವನ್ನು ಒಳಗೊಂಡಿರಲಿದೆ. ಪಾದಯಾತ್ರೆಯ ಒಟ್ಟಾರೆ ಸಂಚಾರದಲ್ಲಿ 21 ದಿನ ಬೆಂಗಳೂರಿನಲ್ಲಿಯೇ ರಾಹುಲ್ ಗಾಂಧಿ ಸಂಚರಿಸಲಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಇವರಿಗೆ ಸಾಥ್ ನೀಡಲಿದ್ದಾರೆ.
ಈ ಸಂದರ್ಭ ರಾಹುಲ್ ಗಾಂಧಿ 511 ಕಿ.ಮೀ ಕರ್ನಾಟಕದಲ್ಲಿ ಕ್ರಮಿಸಲಿದ್ದಾರೆ. ತಮಿಳುನಾಡಿನಲ್ಲಿ ಮೂರು ದಿನ ಯಾತ್ರೆ ಪೂರೈಸಿದ ಬಳಿಕ ಸೆಪ್ಟೆಂಬರ್ 11ರಂದು ಯಾತ್ರೆ ಕೇರಳ ಪ್ರವೇಶಿಸಲಿದೆ. ಕರ್ನಾಟಕದಲ್ಲಿ ಯಾತ್ರೆ ಮುಗಿದ ನಂತರ ತೆಲಂಗಾಣದತ್ತ ಪ್ರವೇಶ ಮಾಡುವ ರಾಹುಲ್ ಗಾಂಧಿ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಹ ತಲಾ 15 ರಿಂದ 20 ದಿನ ಸಂಚರಿಸಲಿದ್ದಾರೆ.
148 ದಿನಗಳ ಯಾತ್ರೆ:ಕೊನೆೆಯಲ್ಲಿ ಮೂರರಿಂದ ಐದು ದಿನಗಳ ಸಂಚಾರ ಇತರೆ ರಾಜ್ಯಗಳಲ್ಲಿ ಇರಲಿವೆ. ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನು ಒಡೆಯುವ ಷಡ್ಯಂತರ ರೂಪಿಸುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಭಾರತ್ ಜೋಡೋ ಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. 148 ದಿನಗಳ ಕಾಲ ಭಾರತ್ ಜೋಡೋ ಯಾತ್ರೆಯಲ್ಲಿ ಒಟ್ಟು 68 ಲೋಕಸಭಾ ಕ್ಷೇತ್ರಗಳು, 203 ವಿಧಾನಸಭಾ ಕ್ಷೇತ್ರಗಳಲ್ಲಿ ಕೈ ಮುಖಂಡರು ಹೆಜ್ಜೆ ಹಾಕಲಿದ್ದಾರೆ.
ರಾಜ್ಯದಲ್ಲಿ ಸಿದ್ದತೆ:ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಈಗಾಗಲೇ ರಾಹುಲ್ ಗಾಂಧಿ ಸಂಚರಿಸುವ ರಾಜ್ಯದ ವಿವಿಧ ಜಿಲ್ಲೆಗಳ ವೀಕ್ಷಣೆ ಮಾಡಿ ಬಂದಿದ್ದಾರೆ. ರಾಹುಲ್ ಗಾಂಧಿ ರಾಜ್ಯದಲ್ಲಿ ಚಾಮರಾಜನಗರ, ಮೈಸೂರು ನಗರ, ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಭಾರತ್ ಜೋಡೋ ಪಾದಯಾತ್ರೆ ಮಾಡಲಿದ್ದಾರೆ.
ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಹಾಗೂ ಎಐಸಿಸಿಯ ಮಹತ್ವಕಾಂಕ್ಷಿ ಕಾರ್ಯದಲ್ಲಿ ಒಂದಾಗಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಸಂಚರಿಸುವ ಎಲ್ಲಾ ಜಿಲ್ಲೆಗಳಿಗೂ ಈಗಾಗಲೇ ಒಂದು ಸುತ್ತು ಭೇಟಿ ನೀಡಿ ಬಂದಿದ್ದೇನೆ. ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ರಾಹುಲ್ ಜೊತೆ ಹೆಜ್ಜೆ ಹಾಕಲಿದ್ದೇವೆ. ದೇಶದ ಇತಿಹಾಸವನ್ನೇ ಬದಲಿಸಿ ಯುವ ಸಮುದಾಯಕ್ಕೆ ತಪ್ಪು ಸಂದೇಶ ರವಾನೆ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ನಾವು ಸಮರ್ಥವಾಗಿ ಹೋರಾಡಲಿದ್ದೇವೆ. ದೇಶ ಒಂದಾಗಿ ನಮಗೆ ಸಹಕಾರ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ: ರಾಜ್ಯದ 8 ಜಿಲ್ಲೆಗೆ ಸಂಯೋಜಕರ ನೇಮಕ