ಬೆಂಗಳೂರು:ಪ್ರಿಯಕರನಿಗಾಗಿ ಮನೆಯಲ್ಲಿದ್ದ ತಾಯಿಯ ಚಿನ್ನಾಭರಣವನ್ನು ಕಳ್ಳತನ ಮಾಡುತ್ತಿದ್ದ ಯುವತಿ ಹಾಗೂ ಆಕೆಯ ಪ್ರಿಯತಮನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಕ್ಕೂರು ಲೇಔಟ್ ನಿವಾಸಿ ರತ್ನಮ್ಮ ಎಂಬುವವರು ಮಗಳ ವಿರುದ್ಧ ನೀಡಿದ ದೂರಿನ ಮೇರೆಗೆ ದೀಪ್ತಿ ಹಾಗೂ ಮದನ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಜಕ್ಕೂರು ಲೇಔಟ್ನಲ್ಲಿ ರತ್ನಮ್ಮ ಹಾಗೂ ಪುತ್ರಿ ದೀಪ್ತಿ ವಾಸವಾಗಿದ್ದರು. ರತ್ನಮ್ಮ ಟೈಲರ್ ಕೆಲಸ ಮಾಡುತ್ತಿದ್ದರೆ, ಪುತ್ರಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು. ದೀಪ್ತಿಗೆ ಡಿವೋರ್ಸ್ ಆಗಿತ್ತು. ಈ ನಡುವೆ ಡ್ರೈವಿಂಗ್ ಕಲಿಯಲು ಮದನ್ ನಡೆಸುತ್ತಿದ್ದ ಡೈವಿಂಗ್ ಸ್ಕೂಲ್ಗೆ ಸೇರಿಕೊಂಡಿದ್ದಳು. ಇಲ್ಲಿ ಶುರುವಾದ ಸ್ನೇಹ ಪ್ರೀತಿಗೆ ತಿರುಗಿದೆ. ಮದನ್ಗೆ ಮದುವೆಯಾಗಿ ಇಬ್ಬರೂ ಮಕ್ಕಳಿದ್ದರೂ ದೀಪ್ತಿ ಪ್ರೀತಿಗೆ ಸೈ ಅಂದಿದ್ದ. ಮದನ್ ಪ್ರೀತಿಗೆ ಶರಣಾಗಿದ್ದ ದೀಪ್ತಿ, ಪ್ರಿಯಕರನ ಅಣತಿಯಂತೆ ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದಾಳೆ. ಹಂತ-ಹಂತವಾಗಿ ಸುಮಾರು ಒಂದು ಕೆ.ಜಿ.ಚಿನ್ನ ಕಳ್ಳತನ ಮಾಡಿ ಕೊಟ್ಟಿದ್ದಾಳೆ. ತಾಯಿಗೆ ಅನುಮಾನ ಬಾರದಿರಲು ಕದ್ದ ಜಾಗದಲ್ಲಿ ನಕಲಿ ಚಿನ್ನಾಭರಣ ಇಟ್ಟಿದ್ದಾಳೆ.