ಕರ್ನಾಟಕ

karnataka

ETV Bharat / city

ಪ್ರಸಿದ್ಧ ಘಾಟಿ ದನಗಳ ಜಾತ್ರೆಗೆ ಗ್ರೀನ್‌ ಸಿಗ್ನಲ್‌; ಜನವರಿ ಮೊದಲ ವಾರದಲ್ಲೇ ದನಗಳ ಸಂಗಮ

2021ರ ಜನವರಿ ಮೊದಲ ವಾರದಿಂದ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಕ್ಷೇತ್ರದಲ್ಲಿ ನಡೆಯಲಿರುವ ದನಗಳ ಜಾತ್ರೆಗೆ ಜಿಲ್ಲಾಡಳಿತ ಗ್ರೀನ್‌ ಸಿಗ್ನಲ್‌ ನೀಡಿದೆ. ಇದು ರೈತರು ಹಾಗೂ ವ್ಯಾಪಾರಿಗಳ ಸಂತಸಕ್ಕೆ ಕಾರಣವಾಗಿದೆ.

Bengaluru rural district Dc Green signal For Cattle fair
ಪ್ರಸಿದ್ಧ ಘಾಟಿ ದನಗಳ ಜಾತ್ರೆಗೆ ಗ್ರೀನ್‌ ಸಿಗ್ನಲ್‌; ಜನವರಿ ಮೊದಲ ವಾರದಲ್ಲೇ ದನಗಳ ಸಂಗಮ

By

Published : Dec 20, 2020, 4:53 AM IST

Updated : Dec 20, 2020, 8:53 AM IST

ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ) : ಮಹಾಮಾರಿ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮರಥೋತ್ಸ ಮತ್ತು ದನಗಳ ಜಾತ್ರೆ ನಡೆಯುವುದು ಅನುಮಾನವಾಗಿತ್ತು. ಆದರೆ ದನಗಳ ಜಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡಿರುವುದು ರೈತರು ಹಾಗೂ ವ್ಯಾಪಾರಿಗಳಲ್ಲಿ ಸಂತಸ ಮನೆ ಮಾಡಿದೆ.

2021ರ ಜನವರಿ ಮೊದಲ ವಾರದಿಂದ ಘಾಟಿ ಕ್ಷೇತ್ರದಲ್ಲಿ ರಾಸುಗಳ ಸಂಗಮವಾಗಲಿದೆ. ಕರ್ನಾಟಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ, ನಾಗರಾಧನೆಯ ಶ್ರೀಕ್ಷೇತ್ರವಾಗಿರುವ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹಾಗೆಯೇ ಬ್ರಹ್ಮರಥೋತ್ಸವ ಸಮಯದಲ್ಲಿ ನಡೆಯುವ ದನಗಳ ಜಾತ್ರೆ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ, ರೈತ ತಾನೂ ಬೆಳೆದ ಫಸಲನ್ನು ಮನೆಗೆ ತುಂಬಿಕೊಳ್ಳುವ ಸಮಯ, ಕೃಷಿ ಚಟುವಟಿಕೆಗಳು ಮುಗಿದು ವಿಶ್ರಾಂತಿ ಪಡೆಯುವ ಸಮಯ. ಈ ವೇಳೆ ರೈತ ಮುಂದಿನ ಬೇಸಾಯಕ್ಕೆ ಬೇಕಾದ ದನಗಳನ್ನು ಖರೀದಿಸಲು ಮುಂದಾಗುತ್ತಾನೆ.

ಎಷ್ಟೇ ಅಧುನಿಕ ತಂತ್ರಜ್ಞಾನ ಬಂದರೂ ಕೆಲವರು ಸಾಂಪ್ರದಾಯಿಕ ಕೃಷಿಗೆ ದನಗಳನ್ನೇ ನೆಚ್ಚಿಕೊಂಡಿದ್ದಾರೆ. ಇವರಿಗೆ ದನಗಳು ಇಲ್ಲದಿದ್ರೆ ಕೃಷಿ ಮಾಡುವುದು ಅಸಾಧ್ಯ. ಭೂಮಿ ಉಳುಮೆಯಿಂದ ಹಿಡಿದು ಕೃಷಿಗೆ ಬೇಕಾದ ಗೊಬ್ಬರ ಮತ್ತು ಕೃಷಿ ಉತ್ಪನ್ನಗಳನ್ನ ಸಾಗಾಣಿಕೆ ಮಾಡಲು ಸಹ ರೈತನಿಗೆ ರಾಸುಗಳು ಬೇಕೇ ಬೇಕು. ಈ ಸಮಯದಲ್ಲಿ ನಡೆಯುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ದನಗಳ ಜಾತ್ರೆ ರೈತರಿಗೆ ಅಚ್ಚುಮೆಚ್ಚು.

ಜೊತೆಗೆ ರಾಸುಗಳನ್ನು ಮಾರಲು ಸಹ ರೈತರು ಬರ್ತಾರೆ. ಕೊಳ್ಳುವ ಮತ್ತು ಮಾರುವರ ರೈತರಿಗೆ ಜಾತ್ರೆ ವೇದಿಕೆಯಾಗುತ್ತವೆ. 2020-21ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ವಾರ್ಷಿಕ ಜಾತ್ರೆ ಉತ್ಸವ 2021ರ ಜನವರಿ 15 ರಿಂದ ಆರಂಭವಾಗುತ್ತದೆ. 19-01-2021ರ ಪುಷ್ಯ ಶುದ್ಧ ಷಷ್ಠಿಯ ಮಂಗಳವಾರದಂದು ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ನಡೆಯ ಬೇಕಿತ್ತು. ಆದರೆ ಪ್ರತಿವರ್ಷದಂತೆ ಈ ಬಾರಿಯು ಬ್ರಹ್ಮರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಿಸುವುದರಿಂದ, ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಲಾಗಿದ್ದು, ಕೇವಲ ಸಾಂಕೇತಿಕವಾಗಿ ದೇವಾಲಯದ ಒಳ ಅವರಣದಲ್ಲಿ ಬ್ರಹ್ಮರಥೋತ್ಸವ ಆಚರಣೆಗೆ ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ.

ಪ್ರತಿ ವರ್ಷ ನಡೆಯುವ ಜಾತ್ರೆಯನ್ನು ರದ್ದು ಮಾಡಲಾಗಿತ್ತು. ಆದರೆ ದನಗಳ ಜಾತ್ರೆ ರದ್ದು ಮಾಡಿರುವ ಬಗ್ಗೆ ರೈತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನುಮತಿ ನೀಡಿದೆ. ಬ್ರಹ್ಮರಥೋತ್ಸವ ಜನವರಿ 19 ರಂದು ನಡೆಯಲಿದ್ದು, ಅದಕ್ಕೂ ಮುನ್ನ ಜನವರಿ ಮೊದಲ ವಾರದಿಂದ ದನಗಳ ಜಾತ್ರೆ ಪ್ರಾರಂಭವಾಗಲಿದೆ. ಇದಕ್ಕಾಗಿ ದೇವಸ್ಥಾನ ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಜಾನುವಾರುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಲಾಗುತ್ತಿದೆ. ಪಶು ಆಸ್ಪತ್ರೆಯಿಂದ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ.

ಕೋವಿಡ್ -19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದೆಂದು ಘಾಟಿ ದೇವಸ್ಥಾನದ ಕಾರ್ಯನಿರ್ವಾಹ ಅಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ. ದನಗಳ ಜಾತ್ರೆ ನಡೆಯುತ್ತೊ ಇಲ್ಲವೋ ಎಂಬ ಗೊಂದಲವಿತ್ತು. ಇದೀಗ ದನಗಳ ಜಾತ್ರೆಗೆ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಖುಷಿ ನೀಡಿದೆ ಎನ್ನುತ್ತಾರೆ ರೈತ ವಾಸು.

Last Updated : Dec 20, 2020, 8:53 AM IST

ABOUT THE AUTHOR

...view details