ಕರ್ನಾಟಕ

karnataka

ETV Bharat / city

ಅಪಘಾತವಾಗಿದೆ ಎಂದು ಟ್ರಾಫಿಕ್‌ ಸೃಷ್ಟಿಸಿ ಸಿನಿಮೀಯ ಶೈಲಿಯಲ್ಲಿ ಸುಲಿಗೆಕೋರರ ಬಂಧಿಸಿದ ಪೊಲೀಸರು!

ರಸ್ತೆಯಲ್ಲಿ ಅಪಘಾತವಾಗಿದೆ ಎಂದು ಟ್ರಾಫಿಕ್ ಆಗುವಂತಹ ಪರಿಸ್ಥಿತಿ ನಿರ್ಮಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಖದೀಮರು
ಬೆಂಗಳೂರು ಖದೀಮರು

By

Published : Oct 12, 2021, 11:38 AM IST

ಬೆಂಗಳೂರು: ಹಲ್ಲೆ ಹಾಗೂ ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ತಪ್ಪಿಸಿಕೊಂಡು ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಿ ಮೂವರು ಸುಲಿಗೆಕೋರರನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ‌.

ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಎಸ್.ನಂಜೇಗೌಡ ಹಾಗೂ ಸುಬ್ರಮಣ್ಯಪುರ ಠಾಣೆಯ ಇನ್ಸ್​ಪೆಕ್ಟರ್ ಕೆ.ಆರ್.ಮಂಜುನಾಥ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸುನಿಲ್, ಹರೀಶ್ ಹಾಗೂ ನವೀನ್‌ ಕುಮಾರ್​ನನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಮೊಬೈಲ್, ಕ್ರೆಡಿಟ್ ಕಾರ್ಡ್​ಗಳು, ಒಂದು ಚಾಕು, 32 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿಕೊಂಡಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ‌. ಸೆರೆಯಾಗಿರುವ ಆರೋಪಿಗಳ ಕ್ರಿಮಿನಲ್ ಹಿನ್ನೆಲೆ ಕುರಿತಂತೆ ಕೋಣನಕುಂಟೆ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತರು

ಡ್ರಾಪ್​​ಗೆ ಕೈ ಚಾಚಿ ಚಾಕುವಿನಿಂದ ಚುಚ್ಚಿದ ಆರೋಪಿಗಳು:

‌ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿ ನಿವಾಸಿ ಶಿವಕುಮಾರ್ ಎಂಬುವರು ಮಾದನಾಯಕಹಳ್ಳಿ ಸಫಾರಿ ಇಂಡಸ್ಟ್ರೀಸ್ ತಯಾರಿಕಾ ಕಂಪೆನಿಯ ವೈರ್ ಹೌಸ್​​ನಲ್ಲಿ ಮ್ಯಾನೇಜರ್ ಆಗಿ ಕೆಲಸ‌ ಮಾಡುತ್ತಿದ್ದರು. ಇದೇ ತಿಂಗಳು 8 ರಂದು ರಾತ್ರಿ ಕೆಲಸ‌ ಮುಗಿಸಿಕೊಂಡು ತುಮಕೂರು ರಸ್ತೆ ಮೂಲಕ ಕ್ಯಾಂಟರ್ ವಾಹನವೊಂದರಲ್ಲಿ ಮನೆಗೆ ಹೋಗುತ್ತಿದ್ದರು‌. ಮಾರ್ಗಮಧ್ಯೆ ಬನ್ನೇರುಘಟ್ಟ ಬ್ರಿಡ್ಜ್ ಬಳಿ ಬರುವಾಗ ಪ್ರಯಾಣಿಕರ ಸೋಗಿನಲ್ಲಿದ್ದ ಆರೋಪಿಗಳು ಹೊಸೂರಿಗೆ ಡ್ರಾಪ್ ನೀಡುವಂತೆ ಕೇಳಿಕೊಂಡಿದ್ದರು.‌ ವಾಹನ ಹತ್ತಿಸಿಕೊಳ್ಳಲು ಮುಂದಾಗುತ್ತಿದ್ದಂತೆ ಅಸಲಿ ವರಸೆ ತೋರಿಸಿದ ಆರೋಪಿಗಳು ಚಾಕು ತೋರಿಸಿ ಹಲ್ಲೆ ಮಾಡಿ ಎಟಿಎಂ, ಕ್ರೆಡಿಟ್ ಕಾರ್ಡ್ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು‌‌. ಈ ಸಂಬಂಧ ಶಿವಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಸುಲಿಗೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶ ಕಂಡಿದ್ದಾರೆ.

ಆ್ಯಕ್ಸಿಡೆಂಟ್ ಆಗಿದೆ ಎಂದು ಹೈಡ್ರಾಮ ಸೃಷ್ಟಿಸಿ ಬಂಧಿಸಿದ ಖಾಕಿ:

ದೂರಿನ ಮೇರೆಗೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಕೋಣನಕುಂಟೆ ಹಾಗೂ‌ ಸುಬ್ರಮಣ್ಯಪುರ ಪೊಲೀಸರ ಎರಡು ವಿಶೇಷ ತಂಡಗಳನ್ನ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ತಾಂತ್ರಿಕ ಹಾಗೂ ವಿವಿಧ ಆಯಾಮಗಳಿಂದ ತನಿಖೆ ನಡೆಸಿದಾಗ ವಾಹನದಲ್ಲಿ ಕನಕಪುರ ರಸ್ತೆ ಮೂಲಕ‌ ತಾಟಗುಪ್ಪೆ ಬಳಿ ಆರೋಪಿಗಳು ಬರುತ್ತಿರುವುದನ್ನು ಅರಿತಿದ್ದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ರಸ್ತೆಯಲ್ಲಿ ಅಪಘಾತವಾಗಿದೆ ಎಂದು ಹೈಡ್ರಾಮ ಸೃಷ್ಟಿಸಿ ಟ್ರಾಫಿಕ್ ಆಗುವಂತಹ ಪರಿಸ್ಥಿತಿ ನಿರ್ಮಿಸಿದ್ದರು. ಅಲ್ಲದೆ ಪ್ರತಿಯೊಂದು ವಾಹನ ತಪಾಸಣೆ ಮಾಡಿದರೆ ಆರೋಪಿಗಳು ಎಸ್ಕೇಪ್ ಆಗುವ ಸಾಧ್ಯತೆ ಇದ್ದಿದ್ದರಿಂದ‌ ಪೊಲೀಸರು ಈ ಕಾರ್ಯತಂತ್ರ ರೂಪಿಸಿದ್ದರು. ಆರೋಪಿಗಳು ಸಹ ತಾಟಗುಪ್ಪೆ ಬಳಿ ಬಂದಾಗ ಅಪಘಾತವಾಗಿದೆ ಎಂದೇ ಭಾವಿಸಿಕೊಂಡಿದ್ದರು. ಸುಲಿಗೆಕೋರರು ಸ್ಥಳಕ್ಕೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.

ABOUT THE AUTHOR

...view details