ಬೆಂಗಳೂರು: ಪ್ರತಿಯೊಬ್ಬರೂ ಐದು ಗಿಡಗಳನ್ನು ಬೆಳೆಸಬೇಕು ಎಂದು ರಾಜ್ಯದ ಜನತೆಗೆ ಕರೆ ನೀಡಿ, ಜನರ ಸಹಭಾಗಿತ್ವದಿಂದ ಮಾತ್ರ ಅರಣ್ಯೀಕರಣದ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದಾಸನಪುರ ಹೋಬಳಿಯ ಮಾಚೋಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಆಯೋಜಿಸಿದ್ದ ಮಾಚೋಹಳ್ಳಿ ವೃಕ್ಷೋಧ್ಯಾನ ಕಾರ್ಯಕ್ರಮ ಮತ್ತು ವನಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಇಂದಿನ ಎಲ್ಲ ಬಡಾವಣೆಗಳಲ್ಲಿ ಉದ್ಯಾನಗಳು, ಗಿಡಮರಗಳಿವೆ. ಬೆಂಗಳೂರು ಉದ್ಯಾನನಗರ ಎಂದು ಕರೆಯಲ್ಪಡುತ್ತದೆ. ಈಗ ನಾಗರಿಕತೆ ಹೆಚ್ಚಾಗಿದ್ದು, ಉದ್ಯಮಗಳು ಹೆಚ್ಚಾಗಿದೆ. ಅರಣ್ಯ ಇಲಾಖೆ ವತಿಯಿಂದ ಬೆಂಗಳೂರಿನ ಸುತ್ತಲೂ ಅರಣ್ಯ ಉದ್ಯಾನವನ ಬೆಳೆಸಲು ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರಣ್ಯೀಕರಣ ಯೋಜನೆಗಳಿಗೆ 100 ಕೋಟಿ:ಕಳೆದ ವರ್ಷ ವಿಶ್ವದ ತಾಪಮಾನ ಶೇ. 1 ರಷ್ಟು ಹೆಚ್ಚಾಗಿದ್ದು, ಹಿಮಬಂಡೆಗಳು ಕರುಗುತ್ತಿವೆ. ಇದರಿಂದ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗಿ ಜನರಿಗೆ ತೊಂದರೆಯಾಗುವ ಜೊತೆಗೆ ಪ್ರವಾಹ ಭೀತಿಯೂ ಎದುರಾಗುತ್ತದೆ. ಈ ಸಾಲಿನ ಆಯವ್ಯಯದಲ್ಲಿ ಹಸಿರು ಬಜೆಟ್ನ್ನು ರೂಪಿಸಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಪರಿಸರ ಹಾನಿಯನ್ನು ಸರಿದೂಗಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು, ಕ್ರಿಯಾ ಯೋಜನೆ ಸಿದ್ಧವಾಗುತ್ತಿದೆ. ಪ್ರತಿ ವರ್ಷವೂ ಪರಿಸರದ ಹಾನಿಯಿಂದಾಗುವ ಕೊರತೆಯನ್ನು ನೀಗಿಸುವ ಯೋಜನೆಗಳನ್ನು ರೂಪಿಸಲು ಅರಣ್ಯ ಇಲಾಖೆಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಗಂಧದ ಮರ ನಿರ್ವಹಣೆಗೆ ನಿಯಮ ಸರಳೀಕರಣ:ಗಂಧದ ಮರಗಳು ಮನೆಯಲ್ಲಿದ್ದರೆ ಅದನ್ನು ನಿಭಾಯಿಸುವುದು ಕಷ್ಟವಾಗಿದ್ದು, ಈ ನಿಟ್ಟಿನಲ್ಲಿ ಇರುವ ನಿಯಮಗಳನ್ನು ಸರಳೀಕರಿಸಿ ಗಂಧ ಮರಗಳ ನಿರ್ವಹಣೆಗೆ ಈ ವರ್ಷದ ಆಯವ್ಯಯದಲ್ಲಿ ಅನುಕೂಲ ಕಲ್ಪಿಸಲಾಗಿದೆ. ಕನ್ನಡ ನಾಡನ್ನು ಗಂಧದ ನಾಡು ಎಂಬ ಖ್ಯಾತಿ ಇದೆ. ಗಂಧದ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗುತ್ತದೆ. ಆದ್ದರಿಂದ ಗಂಧದ ಮರಗಳನ್ನು ಹೆಚ್ಚಾಗಿ ಬೆಳೆಸಿ, ರಕ್ಷಣೆ ನೀಡಲು ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.