ಕರ್ನಾಟಕ

karnataka

ETV Bharat / city

ಆಲ್ಕೋಮೀಟರ್ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಬೆಂಗಳೂರಿನಲ್ಲಿ ಪುನಾರಂಭ - ravikantegowda news

ಒಂದು ವೇಳೆ ಚಾಲಕ ಅಥವಾ ಸವಾರ ಆಲ್ಕೋಮೀಟರ್​​ನಲ್ಲಿ ತಪಾಸಣೆಗೆ ಒಳಗಾಗಲು ಇಚ್ಛಿಸದಿದ್ದರೆ, ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾಗುತ್ತದೆ ಎಂದು ನಗರ ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

Bengaluru city traffic  joint police commissioner press meet
ಆಲ್ಕೋಮೀಟರ್ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಬೆಂಗಳೂರಿನಲ್ಲಿ ಪುನಾರಂಭ

By

Published : Sep 26, 2021, 2:17 AM IST

ಬೆಂಗಳೂರು: ಕೋವಿಡ್​​ನಿಂದ ಡ್ರಿಂಕ್ ಆ್ಯಂಡ್ ಡ್ರೈವ್ ವಾಹನ ತಪಾಸಣೆಗೆ ಬ್ರೇಕ್ ಹಾಕಿದ್ದ ನಗರ ಸಂಚಾರ ಪೊಲೀಸರು ಶನಿವಾರದಿಂದಲೇ ನಗರದೆಲ್ಲೆಡೆ ಆಲ್ಕೋಮೀಟರ್ ಮೂಲಕ ತಪಾಸಣೆ ಆರಂಭಿಸಿದ್ದಾರೆ ಎಂದು ನಗರ ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ 2020ರ ಮಾರ್ಚ್ ಕೊನೆಯ ವಾರದಿಂದ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ನಿಲ್ಲಿಸಲಾಗಿತ್ತು. ಆದರೆ, ವಾಹನ ಸವಾರರು ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಾರೆ ಎಂಬ ಆರೋಪವಿತ್ತು. ಇದರಿಂದಾಗಿಯೇ ನಗರದಲ್ಲಿ ಸರಣಿ ಅಪಘಾತಗಳಾಗುತ್ತಿವೆ ಎಂಬ ಆರೋಪವು ಕೇಳಿ ಬಂದಿತ್ತು ಎಂದಿದ್ದಾರೆ.

ದೇಶದ ಬೇರೆ ಬೇರೆ ಮಹಾನಗರಗಳಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಆರಂಭವಾಗಿದೆ. ಹೀಗಾಗಿ ವೈದ್ಯರು, ತಜ್ಞರ ಸಲಹೆ ಪಡೆದು ಮೊದಲಿನಂತೆ ಆಲ್ಕೋಮೀಟರ್ ಮೂಲಕ ತಪಾಸಣೆ ನಡೆಯಲಿದೆ. ಈ ಮೂಲಕ ನಗರದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ವಿಭಾಗದಲ್ಲಿರುವ 600 ಆಲ್ಕೋಮೀಟರ್​ಗಳನ್ನು ಸಂಬಂಧಿಸಿದ ಕಂಪನಿಯವರು ಪರಿಶೀಲನೆ ನಡೆಸಿದ್ದಾರೆ. ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.

ಒಬ್ಬರಿಗೆ ಒಂದೇ ಆಲ್ಕೋಮೀಟರ್:ಶನಿವಾರ ರಾತ್ರಿಯಿಂದಲೇ ನಗರದ 44 ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಆಲ್ಕೋಮೀಟರ್​ನಲ್ಲಿಯೇ ತಪಾಸಣೆ ಆರಂಭಿಸಿದ್ದು, ಪ್ರತಿ ಠಾಣೆಗೆ 10 ಆಲ್ಕೋಮೀಟರ್ ನೀಡಲಾಗಿದೆ. ಅವುಗಳನ್ನು ಜಿಪ್ ಲಾಕ್​ ಕವರ್​ನಲ್ಲಿ ಇಡಲಾಗಿದೆ. ಒಮ್ಮೆ ಒಬ್ಬರಿಗೆ ಉಪಯೋಗಿಸಿದ ಯಂತ್ರವನ್ನು ಬೇರೆ ಯಾರಿಗೂ ಬಳಸುವುದಿಲ್ಲ. ಬಳಿಕ ಮತ್ತೆ ಅವುಗಳನ್ನು 48 ಗಂಟೆಗಳ ಕಾಲ ಜಿಪ್​​ ಲಾಕ್​ ಕವರ್​​​ನಲ್ಲಿ ಪ್ರತ್ಯೇಕಿಸಲಾಗುತ್ತದೆ. ನಂತರ ಸ್ಯಾನಿಟೈಸರ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲಿಗೆ ವಾಹನ ಸವಾರನ ಬಳಿ ಮೌಖಿಕವಾಗಿ ಮದ್ಯಪಾನ ಮಾಡಿರುವ ಬಗ್ಗೆ ಪರಿಶೀಲಿಸಲಾಗುತ್ತದೆ. ಅನುಮಾನ ಬಂದ ಬಳಿಕ ಆಲ್ಕೋಮೀಟರ್ ಮೂಲಕ ತಪಾಸಣೆ ನಡೆಸಲಾಗುತ್ತದೆ. ತಪಾಸಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಸಂಚಾರ ಪೊಲೀಸರು ಕೂಡ ಸ್ಥಳದಲ್ಲಿಯೇ ಸ್ಯಾನಿಟೈಸರ್ ಬಳಕೆ, ಹ್ಯಾಂಡ್‍ ಗ್ಲೌಸ್, ಮಾಸ್ಕ್, ಫೇಸ್‍ಶೀಲ್ಡ್ ಬಳಸುವುದು ಕಡ್ಡಾಯ. ಜತೆಗೆ ಪ್ರತಿಬಾರಿಯೂ ತಪಾಸಣೆ ನಡೆಸಿದ ನಂತರ ಹ್ಯಾಂಡ್ ಸ್ಯಾನಿಟೈಸ್ ಮಾಡಲಾಗುತ್ತದೆ. ಇದರೊಂದಿಗೆ ಕುಡಿದು ಅನುಮಾನ ಬಂದ ವಾಹನ ಚಾಲಕ ಅಥವಾ ಸವಾರರ ವಿಡಿಯೋ ಕೂಡ ಮಾಡಲು ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ವೈದ್ಯಕೀಯ ಪರೀಕ್ಷೆ:ಒಂದು ವೇಳೆ ಚಾಲಕ ಅಥವಾ ಸವಾರ ಆಲ್ಕೋಮೀಟರ್​​ನಲ್ಲಿ ತಪಾಸಣೆಗೆ ಒಳಗಾಗಲು ಇಚ್ಛಿಸದಿದ್ದರೆ, ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಅದಕ್ಕೂ ನಿರಾಕರಿಸಿದರೆ, ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ರೌಡಿ ಶೀಟ್ ತೆರೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ವಾಹನ ಸವಾರರು ಸಂಚಾರ ಪೊಲೀಸರ ಜೊತೆ ಸಹಕಾರ ನೀಡಬೇಕು ಎಂದು ಈ ವೇಳೆ ಮನವಿ ಮಾಡಿದ್ದಾರೆ.

ಎಲಿವೇಡೆಟ್ ಕಾರಿಡಾರ್​​ನಲ್ಲಿ ಕ್ಯಾಮೆರಾ:ನಗರದಲ್ಲಿ ಸಿದ್ಧವಾಗುತ್ತಿರುವ 12 ಎಲಿವೇಟೆಡ್ ಕಾರಿಡಾರ್​ಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಅಧ್ಯಯನ ನಡೆಸಿ ಸಂಬಂಧಿಸಿದ ಕಂಪನಿ, ಇಲಾಖೆಗೆ ವರದಿ ನೀಡಿತ್ತು. ಇದೀಗ ಮತ್ತೊಮ್ಮೆ ಅಧ್ಯಯನ ನಡೆಸಿ ಒಂದೆರಡು ದಿನಗಳಲ್ಲಿ ವರದಿ ಕೊಡಲಿದೆ. ನಂತರ ಈ ವೇಳೆ ಎಎನ್‍ಪಿಆರ್ (ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೇಷನ್) ಕ್ಯಾಮೆರಾ ಅಳವಡಿಕೆಗೆ ಕೋರಲಾಗುತ್ತದೆ.

ಪ್ರತಿ ಎಲಿವೇಟೆಡ್ ಕಾರಿಡಾರ್ ಬಳಸುವ ಆರಂಭದಲ್ಲಿ ವಾಹನ ಸವಾರ ಎಷ್ಟು ವೇಗವಾಗಿ ವಾಹನ ಚಾಲನೆ ಮಾಡಿದ್ದಾನೆ. ಎಷ್ಟು ಸಮಯದಲ್ಲಿ ಎಲಿವೇಟೆಡ್ ಕಾರಿಡಾರ್​​​ನಲ್ಲಿ ಹೊರಹೋಗಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಈ ಕ್ಯಾಮೆರಾದಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ.

ಗುಂಡಿ ಮುಚ್ಚಲು ಸೂಚನೆ:ಪ್ರತಿ ಸಂಚಾರ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿರುವ ಗುಂಡಿಗಳ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡಲಾಗುತ್ತಿದೆ. ಅದೇ ರೀತಿ ಬಿಬಿಎಂಪಿ ಅಧಿಕಾರಿಗಳು ಕೂಡ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ರವಿಕಾಂತೇಗೌಡ ಹೇಳಿದ್ದಾರೆ.

ಟೋಯಿಂಗ್ ಸಿಬ್ಬಂದಿ ಅಮಾನತು:ಟೋಯಿಂಗ್ ಮಾಡುವಾಗ ಸಂಚಾರ ಪೊಲೀಸರು ಮೊಬೈಲ್‍ನಲ್ಲಿ ಸೆರೆ ಹಿಡಿಯಬೇಕು. ಒಬ್ಬ ಎಎಸ್‍ಐ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು. ಟೋಯಿಂಗ್ ಸಿಬ್ಬಂದಿ ಕೂಡ ಸಮವಸ್ತ್ರ ಧರಿಸಬೇಕು. ಟೋಯಿಂಗ್‍ಗೆ ಮೊದಲು ಧ್ವನಿವರ್ಧಕದ ಮೂಲಕ ಸೂಚಿಸಬೇಕು. ನಂತರವೂ ವಾಹನ ಮಾಲೀಕರು ಬರದಿದ್ದಾಗ, ವಾಹನದ ನಾಲ್ಕು ಕಡೆಯಿಂದ ಫೋಟೋ ತೆಗೆದುಕೊಂಡು ಟೋಯಿಂಗ್ ಮಾಡಬೇಕು.

ಟೋಯಿಂಗ್ ಮಾಡುವಾಗ ಮಾಲೀಕ ಬಂದರೆ, ನೋ ಪಾರ್ಕಿಂಗ್ ದಂಡ ಮಾತ್ರ ಕಟ್ಟಿಸಿಕೊಳ್ಳಬೇಕು. ಟೋಯಿಂಗ್ ಮಾಡಿದರೆ ಮಾತ್ರ ಟೋಯಿಂಗ್, ನೋ ಪಾರ್ಕಿಂಗ್ ದಂಡ ಎರಡನ್ನೂ ಕಟ್ಟಿಸಿಕೊಳ್ಳಬೇಕು. ಟೋಯಿಂಗ್ ಯಾರ್ಡ್‍ನಲ್ಲಿ ಒಬ್ಬ ಸಿಬ್ಬಂದಿ ಇರಲಿದ್ದಾರೆ. ಈ ವೇಳೆ ಟೋಯಿಂಗ್ ನಿಯಮ ಪಾಲಿಸದ ಐದು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಜೊತೆಗೆ ಟೋಯಿಂಗ್ ಸಂದರ್ಭದಲ್ಲಿ ಲೈವ್ ಸ್ಟ್ರೀಮಿಂಗ್ ಮಾಡದ 45 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.

ಇದನ್ನೂ ಓದಿ:ಕ್ಯಾಬ್​​​​​ನಲ್ಲಿ ಅತ್ಯಾಚಾರ ಪ್ರಕರಣ: ಸಂತ್ರಸ್ಥೆ ಮತ್ತು ಆರೋಪಿ ಇಬ್ಬರೂ ಪರಿಚಯಸ್ಥರೆ..!

ABOUT THE AUTHOR

...view details