ದೇವನಹಳ್ಳಿ : ಬಾಂಬ್ ಪತ್ತೆ ಹಚ್ಚಲು ಮತ್ತು ಸ್ಫೋಟಕಗಳನ್ನು ನಾಶಪಡಿಸುವ ಕಾರ್ಯದಲ್ಲಿ ವಿಶೇಷ ಪರಿಣಿತಿ ಇರುವ ತಳಿಯ ಶ್ವಾನಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆ ತಂಡಕ್ಕೆ ಸೇರ್ಪಡೆಯಾಗಲಿವೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರೆತೆಯನ್ನ ನೋಡಿಕೊಳ್ಳುತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಗೆ ವಿಶೇಷ ತರಬೇತಿಯನ್ನು ಪಡೆದಿರುವ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಆರು ಶ್ವಾನಗಳು ಸೇರ್ಪಡೆಯಾಗಲಿವೆ. ಪೊಲೀಸ್ ಮತ್ತು ಮಿಲಿಟರಿ ಪಡೆಗಳ ಕಾರ್ಯಾಚರಣೆಯಲ್ಲಿ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನಗಳನ್ನ ಬಳಕೆ ಮಾಡಲಾಗುತ್ತೆ.
ಬಾಂಬ್ ಪತ್ತೆ ಮತ್ತು ಸ್ಫೋಟಕಗಳನ್ನು ನಾಶ ಮಾಡುವಲ್ಲಿ ವಿಶೇಷವಾದ ಬುದ್ಧಿವಂತಿಕೆಯನ್ನ ಈ ಶ್ವಾನಗಳು ಹೊಂದಿವೆ. ಈ ಶ್ವಾನಗಳು ಡಿಸೆಂಬರ್ 16ರಂದು ತರಬೇತಿ ಪೂರ್ಣಗೊಳಿಸಿದೆ. ಶೀಘ್ರದಲ್ಲಿಯೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್ ತಂಡಕ್ಕೆ ಸೇರ್ಪಡೆಗೊಳ್ಳಲಿವೆ.
2011ರ ಮೇ 2ರಂದು ಪಾಕಿಸ್ತಾನದಲ್ಲಿ ಮಾಜಿ ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪತ್ತೆ ಹಚ್ಚಿ ಹತ್ಯೆ ಮಾಡುವಲ್ಲಿ ಬೆಲ್ಜಿಯನ್ ಮಾಲಿನೋಯಿಸ್ ಶ್ವಾನ ಅಮೆರಿಕದ ಭದ್ರತಾ ಪಡೆಗೆ ನೆರವಾಗಿತ್ತು. ಹಾಗೆಯೇ, 2019ರ ಅಕ್ಟೋಬರ್ 27ರಂದು ಸಿರಿಯಾದಲ್ಲಿ ಐಸಿಸ್ ಮುಖಂಡ ಅಬುಬಕರ್ ಅಲ್ ಬಗ್ದಾದಿ ಹತ್ಯೆಯಲ್ಲೂ ಈ ಶ್ವಾನಗಳು ಪ್ರಮುಖ ಪಾತ್ರ ವಹಿಸಿದ್ದವು.
ಇದನ್ನೂ ಓದಿ:ಪೆರಿಶಬಲ್ ಉತ್ಪನ್ನಗಳ ರಫ್ತಿನಲ್ಲಿ ದೇಶದಲ್ಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೊದಲ ಸ್ಥಾನ