ಬೆಂಗಳೂರು :ಆನ್ಲೈನ್ ಪಾಠವನ್ನು ಮಕ್ಕಳು ಕೇಳುವ ಸಂದರ್ಭವನ್ನೇ ದುರ್ಬಳಕೆ ಮಾಡಿಕೊಂಡು ಆನ್ಲೈನ್ ಖದೀಮರು ಯಾವುದೇ ಕೃತ್ಯ ಎಸಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಸದ್ಯ ಲಾಕ್ಡೌನ್ ರಿಲೀಫ್ ಆದರೂ ಕೂಡಾ ಶಾಲಾ-ಕಾಲೇಜುಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಕೆಲ ಶಾಲಾ-ಕಾಲೇಜುಗಳು ಮಕ್ಕಳಿಗೆ ಆನ್ಲೈನ್ ತರಗತಿಗಳನ್ನು ಮಾಡುತ್ತಿವೆ.
ಆದರೆ, ಸದ್ಯ ಸೈಬರ್ ಖದೀಮರು ಆ್ಯಕ್ಟೀವ್ ಆಗಿರುವ ಕಾರಣ ಆನ್ಲೈನ್ ಪಾಠವನ್ನು ಮಕ್ಕಳು ಕೇಳುವಾಗ, ಆನ್ಲೈನ್ ಸಿಸ್ಟಮ್ಗೆ ಲಾಗಿನ್ ಆಗುವಾಗ, ಇದನ್ನೇ ದುರ್ಬಳಕೆ ಮಾಡಿಕೊಂಡು ಕೃತ್ಯಗಳನ್ನ ಎಸಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬಹಳಷ್ಟು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರು ಪೊಲೀಸರ ಅಧಿಕೃತ ಟ್ವಿಟರ್ನಲ್ಲಿ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ. ಮಕ್ಕಳು ಆನ್ಲೈನ್ಗೆ ಬಂದಾಗ ಅದನ್ನು ಲಘುವಾಗಿ ಪರಿಗಣಿಸುವುದು ಸೂಕ್ತ ವಿಷಯವಲ್ಲ. ಮಕ್ಕಳನ್ನು ಆನ್ಲೈನ್ನಲ್ಲಿ ಸುರಕ್ಷಿತವಾಗಿರಿಸಿ. ಅಂತೆಯೇ ಸುರಕ್ಷತೆಯ ಬಗ್ಗೆ ವಿವರಿಸಿ ಎಂದು ಸೂಚಿಸಿದ್ದಾರೆ.
ಸೈಬರ್ ಖದೀಮರು ಹೇಗೆ ಕಾಟ ಕೊಡ್ತಾರೆ? :ಮಕ್ಕಳು ಆನ್ಲೈನ್ ಕ್ಲಾಸ್ಗೆಂದು ಸಿಸ್ಟಮ್ಗಳಲ್ಲಿ ಲಾಗಿನ್ ಆಗ್ತಾರೆ. ಈ ಸಂದರ್ಭದಲ್ಲಿ ಸೈಬರ್ ಖದೀಮರು ಅಶ್ಲೀಲ ಮೆಸೇಜ್, ಅಶ್ಲೀಲ ವಿಡಿಯೋ ಪಾಸ್ ಮಾಡುವ ಸಾಧ್ಯತೆ ಇದೆ. ಇದರಿಂದ ಮಕ್ಕಳನ್ನು ಅನ್ಯ ಮಾರ್ಗಕ್ಕೆ ಕರೆದೊಯ್ದ ಹಾಗಾಗುತ್ತದೆ. ಹಾಗೆ ಆನ್ಲೈನ್ ಕ್ಲಾಸ್ ಬೇರೆ ಬೇರೆ ಆ್ಯಪ್ಗಳಲ್ಲಿ ಮಾಡುವ ಕಾರಣ ಪೋಷಕರು ಮೊಬೈಲ್ ನಂಬರ್, ಇಮೇಲ್ ಐಡಿ ನೀಡ್ತಾರೆ. ಇದನ್ನು ಹ್ಯಾಕ್ ಮಾಡುವ ಸಾಧ್ಯತೆ ಬಹಳಷ್ಟಿದೆ. ಹೀಗಾಗಿ ಎಲ್ಲಾ ರೀತಿ ಸುರಕ್ಷತೆಯಿಂದ ಇರಿ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.