ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಒಡೆತನದಲ್ಲಿರುವ ವಾಣಿಜ್ಯ ಸಂಕೀರ್ಣಗಳ ಬಾಕಿ ವಸೂಲಿ ಮಾಡುವಲ್ಲಿ ವಿಫಲರಾದ ಅಧಿಕಾರಿಗಳನ್ನು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತರಾಟೆಗೆ ತೆಗೆದುಕೊಂಡರು.
ಬಿಡಿಎ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ನಿಟ್ಟಿನಲ್ಲಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೆಜ್ಜೆ ಇಟ್ಟಿದ್ದಾರೆ. ಬುಧವಾರ ವಾಣಿಜ್ಯ ಸಂಕೀರ್ಣಗಳ ಸ್ಥಿತಿಗತಿ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಹಲವು ವರ್ಷಗಳಿಂದ ಇಂದಿರಾನಗರದ ವಾಣಿಜ್ಯ ಸಂಕೀರ್ಣವೊಂದರಲ್ಲೇ ಸುಮಾರು 14.40 ಕೋಟಿ ರೂ. ಬಾಡಿಗೆ ಸಂಗ್ರಹ ಮಾಡಿಲ್ಲ. ಇಷ್ಟು ದಿನ ಅಧಿಕಾರಿಗಳು ಏನು ಮಾಡುತ್ತಿದ್ದೀರಿ?. ಈಗ ಕೆಲವು ಅಂಗಡಿ ಮಾಲೀಕರು ಖಾಲಿ ಮಾಡಿ ಹೋಗಿದ್ದಾರೆ. ಈಗ ಅವರ ವಿಳಾಸ ಪತ್ತೆ ಇಲ್ಲ ಎಂದು ಕಾರಣ ನೀಡುತ್ತಿದ್ದೀರಿ. ಅವರಿಂದ ಬಾಕಿ ಬಾಡಿಗೆಯನ್ನು ವಸೂಲಿ ಮಾಡದೇ ಕರ್ತವ್ಯಲೋಪ ಎಸಗಿದ್ದೀರಿ. ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿರುವಾಗ ಬರುವ ಆದಾಯವನ್ನು ಸಂಗ್ರಹ ಮಾಡಲು ನಿಮಗೆ ಸಾಧ್ಯವಾಗಿಲ್ಲ ಎಂದರೆ ಏನರ್ಥ ಎಂದು ತರಾಟೆಗೆ ತೆಗೆದುಕೊಂಡರು.
ಎಚ್ಎಸ್ಆರ್ ಲೇಔಟ್ನ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆಗಳ ಮಾಲೀಕರಿಂದಲೂ 10 ಕೋಟಿ ರೂಪಾಯಿಗೂ ಅಧಿಕ ಬಾಕಿ ಬರಬೇಕಿದೆ. ನೀವೆಲ್ಲ ಹೀಗೆ ಕೆಲಸ ಮಾಡಿದರೆ ಸಂಸ್ಥೆ ಉದ್ಧಾರವಾಗುವುದಾದರೂ ಹೇಗೆ. ಬಾಡಿಗೆ ನೀಡದೇ ಖಾಲಿ ಮಾಡಿಕೊಂಡು ಹೋಗಿರುವ ಮಾಲೀಕರನ್ನು ಪತ್ತೆ ಮಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ, ನಾನೇ ಖುದ್ದಾಗಿ ಸಾಧ್ಯವಾದಷ್ಟು ಮಾಲೀಕರನ್ನು ಪತ್ತೆ ಮಾಡುತ್ತೇನೆ ಎಂದು ಕಿಡಿಕಾರಿದರು.
ನಾಗರಭಾವಿ, ಬಿ.ಎಸ್.ಕೆ 2ನೇ ಹಂತ, ವಳಗೇರಹಳ್ಳಿ, ಆರ್.ಟಿ.ನಗರ, ಆರ್.ಎಂ.ವಿ, ಆಸ್ಟಿನ್ ಟೌನ್, ದೊಮ್ಮಲೂರು, ಎಚ್.ಎಸ್.ಆರ್ ಲೇಔಟ್, ಎಚ್. ಬಿ.ಆರ್ ಲೇಔಟ್, ಕೋರಮಂಗಲ ಸೇರಿದಂತೆ 15 ವಾಣಿಜ್ಯ ಸಂಕೀರ್ಣಗಳಿಂದ ಒಟ್ಟು 40 ಕೋಟಿ ರೂಪಾಯಿಗೂ ಅಧಿಕ ಬಾಡಿಗೆಯನ್ನು ವಸೂಲಿ ಮಾಡಬೇಕಿದೆ. ಇಷ್ಟು ದಿನಗಳ ಕಾಲ ಬಾಡಿಗೆ ವಸೂಲಿ ಮಾಡದೇ ಬಿಟ್ಟಿರುವುದು ತಪ್ಪು. ಈ ಕೂಡಲೇ ಬಾಡಿಗೆ ನೀಡದ ಮಳಿಗೆಗಳ ಮಾಲೀಕರಿಗೆ ನೊಟೀಸ್ ಜಾರಿ ಮಾಡಬೇಕು. 15 ದಿನಗಳೊಳಗೆ ಬಾಡಿಗೆ ವಸೂಲಿ ಪ್ರಕ್ರಿಯೆಯನ್ನು ನಡೆಸಬೇಕೆಂದು ಸೂಚನೆ ನೀಡಿದರು.