ಬೆಂಗಳೂರು: ಕೋವಿಡ್-19 ಭೀತಿ ಹಿನ್ನೆಲೆ ಬಿಬಿಎಂಪಿ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಮೇ 3ರವರೆಗೆ ಯಾವುದೇ ರೀತಿಯ ಕಾಮಗಾರಿಗಳು ನಡೆಯುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಬಿ.ಹೆಚ್.ಅನಿಲ್ ಕುಮಾರ್ ಪ್ರತಿಕ್ರಿಯೆ ನಗರದಲ್ಲಿ ಕಾಮಗಾರಿ ವೇಳೆ ಲಕ್ಷಾಂತರ ವಾಹನಗಳ ಓಡಾಟಕ್ಕೆ ಪರ್ಯಾಯ ರಸ್ತೆಗಳನ್ನು ಕಲ್ಪಿಸಿ, ಟ್ರಾಫಿಕ್ ಜಾಮ್ ಸಮಸ್ಯೆ ಎದುರಿಸಬೇಕಿತ್ತು. ಆದ್ರೆ ಕಾಮಗಾರಿ ನಿರ್ವಹಿಸಲು ಲಾಕ್ಡೌನ್ ವರದಾನವಾಗಿದ್ರೂ ಕೂಡ ಬಿಬಿಎಂಪಿ ಇನ್ನೂ ಚಾಲನೆ ನೀಡಿಲ್ಲ.
ಈ ಕುರಿತು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಅವರನ್ನು ಕೇಳಿದ್ರೆ, ಇಂದು ಕೂಡ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆದಿದೆ. ಕೇಂದ್ರ ಸರ್ಕಾರ ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ಕಾಮಗಾರಿ ನಡೆಸಲು ಸೂಚನೆ ನೀಡಿದೆ. ಕೈಗಾರಿಕೆಗಳು, ರಸ್ತೆಗಳ ಕಾಮಗಾರಿಗಳನ್ನು ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಡಬಹುದು ಎಂದು ನಿರ್ದೇಶನ ನೀಡಿದೆ. ಆದರೆ ನಗರ ಪ್ರದೇಶಗಳಲ್ಲಿ ಇದು ಕಷ್ಟವಾಗಲಿದೆ. ಒಂದು ಸಾರಿ ಕೆಲಸ ಮಾಡಲು ಆರಂಭ ಮಾಡಿದಾಗ ಇತರೆ ಪರಿಕರಗಳು ಬೇಕಾಗುತ್ತವೆ. ಕಾರ್ಮಿಕರನ್ನು ಕೂಡ ಕರೆ ತರಲು, ಬಿಡುವ ವ್ಯವಸ್ಥೆ ಮಾಡಲು ಪ್ರತ್ಯೇಕ ಪಾಸ್ಗಳು ಬೇಕಾಗುತ್ತವೆ. ಇದರ ಜೊತೆಗೆ ಜಲ್ಲಿ, ಸಿಮೆಂಟ್, ಮರಳು ಸರಬರಾಜಿಗೆ ಪ್ರತ್ಯೇಕ ವ್ಯವಸ್ಥೆ ಬೇಕಾಗುತ್ತದೆ. ವಾಹನಗಳ ಓಡಾಟದ ಸಮಯದಲ್ಲೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮೇ 3ರವರೆಗೆ ಯಾವುದೇ ರೀತಿಯ ಕೆಲಸ, ಕಾಮಗಾರಿಗಳು ನಡೆಯುವುದಿಲ್ಲ ಎಂದರು.
ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಅಭಿಯಂತರ ಎನ್.ರಮೇಶ್ ಮಾಹಿತಿ ನೀಡಿ, ನಗರದಲ್ಲಿ ನಾಲ್ಕೈದು ಕಡೆ ನಡೆಯುತ್ತಿದ್ದ ವೈಟ್ ಟಾಪಿಂಗ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸೋನಿ ವರ್ಲ್ಡ್ ಮೇಲ್ಸೇತುವೆ ಹಾಗೂ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೇಲ್ಸೇತುವೆ ಕಾಮಗಾರಿಯೂ ಸ್ಥಗಿತವಾಗಿದೆ. ಲಾಕ್ ಡೌನ್ ಸಮಯದಲ್ಲಿ ಪರಿಕರ ಸಿಗುವುದು ಅನುಮಾನ. ಒಂದು ಸಾರಿ ಸರ್ಕಾರದಿಂದ ಒಪ್ಪಿಗೆ ಸಿಕ್ಕ ಕೂಡಲೇ ಕೆಲಸ ಆರಂಭಿಸಲು ಸಿದ್ಧರಿದ್ದೇವೆ ಎಂದರು.