ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಣ್ಣು ಹಾಯಿಸಿದಷ್ಟು ಕಡೆ ಫ್ಲೆಕ್ಸ್ ಜಾಹೀರಾತುಗಳೇ ಕಾಣಸಿಗುತ್ತಿದ್ದವು. ಇದರಿಂದ ನಗರದ ಸೌಂದರ್ಯವೆಲ್ಲ ಫ್ಲೆಕ್ಸ್ ಹಾವಳಿಯಿಂದ ಅಂದಗೆಟ್ಟಿತ್ತು. ಇದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬ್ರೇಕ್ ಹಾಕಿತ್ತು. ಫ್ಲೆಕ್ಸ್ ನಿಷೇಧಗೊಂಡ ಹಿನ್ನೆಲೆ ಇತ್ತ ಫ್ಲೆಕ್ಸ್ ಬದಲು ಗೋಡೆ ಬರಹ ಬಳಸುತ್ತಿದ್ದ ಜಾಹೀರಾತು ಕಂಪನಿಗಳಿಗೆ ಇದೀಗ ಪಾಲಿಕೆ ಶಾಕ್ ಕೊಟ್ಟಿದೆ.
ಸಿಲಿಕಾನ್ ಸಿಟಿಯಲ್ಲಿ ಗೋಡೆಬರಹ ಹಾಕಿದ್ರೆ ಬೀಳುತ್ತೆ ಎಫ್ಐಆರ್.. ಪಾಲಿಕೆ ಖಡಕ್ ಆದೇಶ
ಫ್ಲೆಕ್ಸ್ ಜಾಹೀರಾತುಗಳಿಂದಲೇ ತುಂಬಿ ತುಳುಕುತ್ತಿದ್ದ ಸಿಲಿಕಾನ್ ಸಿಟಿಯ ಸ್ವಚ್ಚತೆಗೆ ಬಿಬಿಎಂಪಿ ಕಠಿಣ ಆದೇಶ ಹೊರಡಿಸಿ ನಿಲ್ಲಿಸಿತ್ತ. ಆದರೆ ಫ್ಲೆಕ್ಸ್ ಬಿಟ್ಟ ಜಾಹೀರಾತುದಾರರು ಗೋಡೆ ಬರಹಗಳತ್ತ ವಾಲಿದ್ದರು, ಇದು ಇನ್ನೊಂದು ತಲೆನೋವಾಗಿ ಪರಿಣಮಿಸಿದ ಬಿಬಿಎಂಪಿ ಈಗ ಗೋಡೆಬರಹಗಳು ಕಂಡುಬಂದರೆ ಎಫ್ಐಆರ್ ಹಾಕುವುದಾಗಿ ಎಚ್ಚರಿಸಿದೆ.
ಬೆಂಗಳೂರಿನಾದ್ಯಂತ ಗೋಡೆ ಬರಹ ತೆರವಿಗೆ ಪಾಲಿಕೆ ಆದೇಶಿಸಿದ್ದು, ಅನಧಿಕೃತ ಗೋಡೆಬರಹ ಹಾಕಿದ್ರೆ ಎಫ್ಐಆರ್ ಹಾಕಲು ಮುಂದಾಗಿದೆ. ಆರ್ ಟಿಐ ಕಾರ್ಯಕರ್ತ ಸಾಯಿದತ್ತ ಪಿಐಎಲ್ ಹಾಕಿದ ಹಿನ್ನೆಲೆ ಕೋರ್ಟ್ ಜಾಹೀರಾತು ನಿಷೇಧಿಸಿತ್ತು. ಫ್ಲೆಕ್ಸ್ಗಳ ನಿಷೇಧ ಹಿನ್ನೆಲೆ ಗೋಡೆ ಬರಹ ಬಳಸಲು ಕೆಲ ಕಂಪನಿಗಳು ಶುರು ಮಾಡಿದ್ದವು. ಗೋಡೆ ಬರಹದ ವಿರುದ್ಧವೂ ಸಾಯಿದತ್ತ ದೂರು ನೀಡಿದ್ದರು. ಇದೀಗ ಗೋಡೆ ಬರಹ ತೆರವಿಗೆ ಅದೇಶಿದ್ದು, ಅಕ್ರಮವಾಗಿ ಫ್ಲೆಕ್ಸ್, ಬಂಟಿಂಗ್ ಹಾಕಿರೋದನ್ನ ಸಮೀಕ್ಷೆ ನಡೆಸಲು ಸೂಚನೆ ನೀಡಿದೆ.
ವಾರ್ಡ್ ವಾರು ಸಮೀಕ್ಷೆ ನಡೆಸಿ, ತೆರವು ಮಾಡಿ ಸಲ್ಲಿಸಲು ಬಿಬಿಎಂಪಿ ಜಂಟಿ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ. ಹಾಗೇ ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅನಧಿಕೃತ ಜಾಹೀರಾತುಗಳು ಪ್ರದರ್ಶಿಸದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಒಂದು ವೇಳೆ ಇಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ಆಯುಕ್ತರು ನೀಡಿದ್ದಾರೆ.