ಬೆಂಗಳೂರು: ನಿಗದಿತ ಸಮಯಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಲು ವಿಫಲವಾಗಿರುವ ಸಂಸ್ಥೆಯ ವಿರುದ್ಧ ಬಿಬಿಎಂಪಿ ಎಫ್‌ಐಆರ್ ದಾಖಲಿಸಿದೆ.
ನಗರದ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾರ್ಯದ ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈಜಿಪುರದಿಂದ ಕೊರಮಂಗಲದ ಕೇಂದ್ರೀಯ ಸದನದವರೆಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಸಂಸ್ಥೆಯು ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
203 ಕೋಟಿ ರೂ ವೆಚ್ಚದಲ್ಲಿ ಮೇಲ್ವೇತುವೆ ನಿರ್ಮಾಣ ಮಾಡಲು ಗುತ್ತಿಗೆ ಪಡೆದಿದ್ದ ಸಂಸ್ಥೆಯವರು 2017ರಿಂದ 2021ರ ವೇಳೆಗೆ ಫೈಓವರ್ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿತ್ತು. ಆದರೆ, ಕೊಟ್ಟ ಮಾತಿಗೆ ತಪ್ಪಿರುವ ಸಂಸ್ಥೆಯವರು 2021 ಮುಗಿದು 2022 ಆರಂಭಗೊಂಡಿದ್ದರೂ ಇನ್ನು ಶೇ 45 ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದರರೂ ಗಂಭೀರವಾಗಿ ಪರಿಗಣಿಸದ ಗುತ್ತಿಗೆ ಸಂಸ್ಥೆಯ ನಿರ್ದೇಶಕ ರಾಜೀವ್ ಮುಂದಾ ವಿರುದ್ಧ ದೂರು ದಾಖಲಿಸಲಾಗಿದೆ.
ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರರಾಗಿರುವ ಗೀತಾ ಠಾಣೆಗೆ ಬಂದು ಗುತ್ತಿಗೆ ಸಂಸ್ಥೆಯ ವಿರುದ್ಧ ದೂರು ನೀಡಿದ್ದಾರೆ. ನಿನ್ನೆಯಷ್ಟೇ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸಿಂಪ್ಲೆಕ್ಸ್ ಸಂಸ್ಥೆ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿವೇಶನದಲ್ಲಿ ಎಚ್ಚರಿಕೆ ನೀಡಲಾಗಿತ್ತು. ಬೆನ್ನಲ್ಲೆ ಬಿಬಿಎಂಪಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸರೂ ತಿಳಿಸಿದ್ದಾರೆ.
ಇದನ್ನೂ ಓದಿ:ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ: ಸಿದ್ಧರಾಮಯ್ಯ ಪತ್ರ