ಕರ್ನಾಟಕ

karnataka

ETV Bharat / city

ಬ್ಯಾಚ್ ವೈಸ್ ಪಕ್ಷ ಸೇರ್ಪಡೆ: ಮಂಡ್ಯದಲ್ಲಿ ಆಪರೇಷನ್ ಕಮಲದ ಸೂಚನೆ ನೀಡಿದ ಸಿಎಂ..!

ಹೈಕಮಾಂಡ್ ಯಾರಿಗೆಲ್ಲಾ ಒಪ್ಪಿಗೆ ಕೊಟ್ಟಿದೆಯೋ ಅವರೆಲ್ಲಾ ಪಕ್ಷಕ್ಕೆ ಸೇರುತ್ತಾರೆ. ವರ್ತೂರು ಪ್ರಕಾಶ್ ಕೂಡಾ ಸೇರ್ಪಡೆ ಆಗುತ್ತಾರೆ. ಮಂಡ್ಯ ಸಂಸದರ ಸೇರ್ಪಡೆ ಬಗ್ಗೆ ಕಾದು ನೋಡಿ ಎಂದು ಸಚಿವ ಆರ್​. ಅಶೋಕ್ ತಿಳಿಸಿದ್ದಾರೆ.

CM Basavaraja Bommayi and Minister R.Ashok meet S.M.Krishna
ಎಸ್​.ಎಂ.ಕೃಷ್ಣ ಹುಟ್ಟುಹಬ್ಬದ ಹಿನ್ನೆಲೆ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವ ಆರ್​.ಅಶೋಕ್​

By

Published : May 6, 2022, 3:42 PM IST

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಯುವ ನಾಯಕತ್ವ ಹೊರಹೊಮ್ಮಲಿದೆ. ನಮ್ಮ ಪಕ್ಷದ ಬಗ್ಗೆ ನಮ್ಮ ಪಕ್ಷದ ವಿಚಾರಗಳ ಬಗ್ಗೆ ಯಾರೆಲ್ಲಾ ಒಲವು ತೋರಿದ್ದಾರೋ ಅವರೆಲ್ಲರ ಜೊತೆ ಮಾತುಕತೆ ನಡೆಸಿ ಹಂತ ಹಂತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತದೆ ಎಂದು ಚುನಾವಣಾ ಪೂರ್ವದ ಆಪರೇಷನ್ ಕಮಲದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.

ಎಸ್​.ಎಂ.ಕೃಷ್ಣ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಎಸ್.ಎಂ.ಕೃಷ್ಣ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಬಿಜೆಪಿ ಬೃಹತ್ ಸಮಾವೇಶ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಪಕ್ಷದಲ್ಲಿ ನಾಯಕರೆಲ್ಲಾ ಕುಳಿತು ಚರ್ಚಿಸಿ ಆ ಬಗ್ಗೆ ತೀರ್ಮಾನ ಮಾಡುತ್ತೇವೆ. ರಾಜ್ಯದ ಎಲ್ಲ ಭಾಗದಲ್ಲಿಯೂ ಬಹಳ ಜನ ಬಿಜೆಪಿ ಕಡೆ ಬರುತ್ತಿದ್ದಾರೆ. ವಿಶೇಷವಾಗಿ ಕೋಲಾರ ಮಂಡ್ಯ ಭಾಗದಿಂದ ಬರುತ್ತಿದ್ದಾರೆ. ಅವರನ್ನೆಲ್ಲಾ ಬ್ಯಾಚ್ ವೈಸ್ ಬಿಜೆಪಿ ಸೇರ್ಪಡೆಗೆ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ ಎಂದರು.

ಬಹಳ ದೊಡ್ಡ ಪ್ರಮಾಣದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪಕ್ಷಕ್ಕೆ ಸಾರ್ವಜನಿಕರಲ್ಲಿ ಒಲವು ವ್ಯಕ್ತವಾಗಿದೆ. ವಿಶೇಷವಾಗಿ ಯುವಕರಲ್ಲಿ ಪಕ್ಷದ ಮೇಲೆ ಒಲವಿದೆ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಹೊಸ ಯುವ ನಾಯಕತ್ವ ಹೊರಹೊಮ್ಮುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಬಿಜೆಪಿ ಪರವಾಗಿ ಮಂಡ್ಯದಲ್ಲಿ ಬಹಳ ದೊಡ್ಡ ಶಕ್ತಿ ಕಾಣಿಸಲಿದೆ. ಜಯರಾಮ್ ಅವರ ಪುತ್ರ ಮಾತ್ರವಲ್ಲ ಹಲವರ ಜೊತೆ ಮಾತುಕತೆ ನಡೆಸಲಾಗಿದೆ. ಯಾರು ನಮ್ಮ ಪಕ್ಷದ ಬಗ್ಗೆ ನಮ್ಮ ಪಕ್ಷದ ವಿಚಾರಗಳ ಬಗ್ಗೆ ಒಲವು ತೋರಿದ್ದಾರೆ ಅವರೆಲ್ಲರ ಜೊತೆ ಮಾತನಾಡುತ್ತೇವೆ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದರು.

ಸುಮಲತಾ ಬಿಜೆಪಿ ಸೇರ್ಪಡೆ?:ಮಾಜಿ ಶಾಸಕ ಮಾಲೂರು ಮಂಜುನಾಥ್ ಬಿಜೆಪಿ ಸೇರ್ಪಡೆಗೆ ವಿರೋಧ ಇಲ್ಲ, ಈಗಾಗಲೇ ಪಕ್ಷ ಸೇರ್ಪಡೆ ತೀರ್ಮಾನ ಆಗಿದೆ. ಅವರು ನಾಳೆ ಪಕ್ಷ ಸೇರ್ಪಡೆ ಆಗುತ್ತಾರೆ. ಯಾರ್ಯಾರು ಯಂಗ್​ಸ್ಟರ್ಸ್ ಇದ್ದಾರೋ, ಮಾಜಿ ಶಾಸಕರಿದ್ದಾರೋ ಅವರೆಲ್ಲಾ ಸೇರ್ಪಡೆ ಆಗುತ್ತಾರೆ. ಹೈಕಮಾಂಡ್ ಯಾರಿಗೆಲ್ಲಾ ಒಪ್ಪಿಗೆ ಕೊಟ್ಟಿದೆಯೋ ಅವರೆಲ್ಲಾ ಸೇರುತ್ತಾರೆ. ವರ್ತೂರು ಪ್ರಕಾಶ್ ಕೂಡಾ ಸೇರ್ಪಡೆ ಆಗುತ್ತಾರೆ. ಮಂಡ್ಯ ಸಂಸದರ ಸೇರ್ಪಡೆ ಬಗ್ಗೆ ಕಾದು ನೋಡಿ ಎಂದು ಅಶೋಕ್ ತಿಳಿಸಿದರು.

ಎಸ್​.ಎಂ.ಕೆಗೆ ಶುಭ ಕೋರಿದ ಸಿಎಂ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸದಾಶಿವನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದರು. ಎಸ್ಎಂಕೆ ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ನಂತರ ಮಾತನಾಡಿದ ಸಿಎಂ, ನಮ್ಮೆಲ್ಲರ ಹಿರಿಯರು, ಹಿರಿಯ ನಾಯಕರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರು ನಮ್ಮ ಮಾರ್ಗದರ್ಶಕರೂ ಆದ ಎಸ್ಎಂ ಕೃಷ್ಣ ಅವರಿಗೆ 90 ವರ್ಷವಾಗಿದೆ. ಮೊನ್ನೆಯಷ್ಟೇ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ದೂರವಾಣಿ ಮೂಲಕ ಮಾತನಾಡಿ ಶುಭ ಕೋರಿದ್ದೆ,

ಆದರೆ ಅವರನ್ನು ಖುದ್ದು ಭೇಟಿಯಾಗುವುದು ನನ್ನ ಕರ್ತವ್ಯ. ಹಾಗಾಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. 100 ವರ್ಷಗಳ ಕಾಲ ಆರೋಗ್ಯವಂತರಾಗಿ ಬಾಳಲಿ, ನಮಗೆ ಹಾಗೂ ನಮ್ಮ ರಾಜ್ಯಕ್ಕೆ ಮಾರ್ಗದರ್ಶನ ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇದನ್ನೂ ಓದಿ:ದೇಶಕ್ಕೆ ಕರ್ನಾಟಕ ಪೊಲೀಸರು ಮಾದರಿ ಆಗಿದ್ರು, ಈಗ ಪರಿಸ್ಥಿತಿ ಕೆಟ್ಟೋಗಿದೆ: ಆರಗ ಜ್ಞಾನೇಂದ್ರ

ABOUT THE AUTHOR

...view details