ಬೆಂಗಳೂರು: ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡುವ ಸಾರ್ವಜನಿಕರು ಇನ್ನು ಮುಂದೆ ಮೊಬೈಲ್ ಬಳಸುವಂತಿಲ್ಲ. ಮೊಬೈಲ್ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಕಚೇರಿ ಮುಂಭಾಗದಲ್ಲಿ ಮೊಬೈಲ್ ಬಳಕೆ ನಿಷೇಧ ಫಲಕ ಅಳವಡಿಸಲಾಗಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಅವರ ನಿವಾಸಕ್ಕೆ ಭೇಟಿ ನೀಡುತ್ತಿರುವ ಸಾರ್ವಜನಿಕರು, ಅಭಿಮಾನಿಗಳು ಸಿಎಂ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾಗುತ್ತಿದ್ದರು. ಈ ಬೆಳವಣಿಗೆಗಳು ಸಿಎಂಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಕಾರಣ ಇದೀಗ ಮೊಬೈಲ್ ನಿಷೇಧಿಸಲಾಗಿದೆ.
ಸಿಎಂ ನಿವಾಸದ ಮುಂದೆ ಮೊಬೈಲ್ ಬಳಕೆ ನಿಷೇಧ ಫಲಕ ಅಳವಡಿಕೆ ಸಿಎಂ ನಿವಾಸದೊಳಗೆ ಹೋಗುವ ಸಾರ್ವಜನಿಕರು ಹಾಗು ಸಿಎಂ ಭೇಟಿಗೆ ಬರುವವರು ಮೊಬೈಲ್ ತರುವಂತಿಲ್ಲ ಎಂದು ಮುಖ್ಯಮಂತ್ರಿಗಳ ಆರ್.ಟಿ ನಗರದ ನಿವಾಸದ ಎದುರು ಫಲಕ ಹಾಕಲಾಗಿದೆ. ಪ್ರತಿಯೊಬ್ಬರನ್ನು ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತಿದ್ದು, ಮೊಬೈಲ್ ತಂದವರನ್ನು ವಾಪಸ್ ಕಳಿಸಲಾಗುತ್ತಿದೆ.
ಈಗಾಗಲೇ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರು ಮತ್ತು ಸಿಎಂ ಭೇಟಿಗೆ ಬರುವ ಅತಿಥಿಗಳಿಗೆ ಮೊಬೈಲ್ ಕೊಂಡೊಯ್ಯದಂತೆ ಆದೇಶಿಸಲಾಗಿದೆ. ಕೃಷ್ಣಾ ಪ್ರವೇಶಿಸುವವರು ಮುಖ್ಯದ್ವಾರದ ತಪಾಸಣಾ ಕೇಂದ್ರದಲ್ಲಿ ಮೊಬೈಲ್ ಕೊಟ್ಟು ಟೋಕನ್ ಪಡೆದು ಒಳಹೋಗುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಸಿಎಂ ಭೇಟಿ ಮುಗಿಸಿ ವಾಪಸ್ ತೆರಳುವಾಗ ಟೋಕನ್ ನೀಡಿ ತಮ್ಮ ಮೊಬೈಲ್ ವಾಪಸ್ ಪಡೆಯಬೇಕಿದೆ.