ಬೆಂಗಳೂರು:ಕೊರೊನಾ ಲಾಕ್ಡೌನ್ ಬಳಿಕ ಪೊಲೀಸರಲ್ಲಿರುವ ಮಾನವೀಯತೆ ಅನಾವರಣಗೊಳಿಸುವಂತೆ ಮಾಡಿದೆ. ಸಾಮಾನ್ಯವಾಗಿ ಪೊಲೀಸರು ಎಂದರೆ ಲಾಠಿ ಹಿಡಿದು ಹೊಡೆದು ಜನರ ದೃಷ್ಟಿಯಲ್ಲಿ ಕಲ್ಲು ಹೃದಯದವರು ಎಂಬ ಮಾತನ್ನು ಸಿಲಿಕಾನ್ ಸಿಟಿ ಪೊಲೀಸರು ದೂರ ಮಾಡಿದ್ದಾರೆ.
ನಗರದ ಮಾರತ್ ಹಳ್ಳಿ, ಜಾಲಹಳ್ಳಿ, ಪುಲಕೇಶಿನಗರ ನಗರ ಸೇರಿ ಬಹುತೇಕ ಠಾಣೆಗಳು ಸಾರ್ವಜನಿಕರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿವೆ. ಆಡುಗೋಡಿ ಪೊಲೀಸರಂತೂ ತಮ್ಮ ಠಾಣಾ ವ್ಯಾಪ್ತಿಯ ಗುಲ್ಬರ್ಗ ಕಾಲೋನಿಯಲ್ಲಿ ವಾಸಿಸುತ್ತಿರುವ ನೂರಕ್ಕೂ ಹೆಚ್ಚು ವಲಸೆ ಕುಟುಂಬಗಳನ್ನು ದತ್ತು ತೆಗೆದುಕೊಂಡು ಲಾಕ್ ಡೌನ್ ಮುಗಿಯುವರೆಗೂ ರೇಷನ್ ಒದಗಿಸುವ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ.
ವಿವಿಧ ಸಂಘ- ಸಂಸ್ಥೆಗಳಿಂದ ನೀಡುವ ಆಹಾರ ಪೊಟ್ಟಣ, ರೇಷನ್ ಕಿಟ್ ಸೇರಿದಂತೆ ಅಗತ್ಯ ವಸ್ತುಗಳ ಹಂಚುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಲಸೆ ಕಾರ್ಮಿಕರು ನೆಲೆಸಿರುವ ಪ್ರದೇಶಗಳಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖುದ್ದು ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದಕ್ಕೆ ಎಲ್ಲ ವಲಯದ ಡಿಸಿಪಿಗಳು ಸಾಥ್ ನೀಡಿದ್ದಾರೆ.