ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಟೆನ್ಷನ್ ನಡುವೆ ಮತ್ತೊಂದು ಟೆನ್ಷನ್ ಎದುರಾಗಿದೆ. ಅದು ಪೊಲೀಸ್ ಪೇದೆಯ ಸೋಂಕು ಪ್ರಕರಣ. ಹೌದು, ಸೋಂಕು ದೃಢಪಟ್ಟು ಮತ್ತೆ ಸುಳ್ಳಾದ ಎರಡು ಪ್ರಕರಣಗಳು ಅಚ್ಚರಿ ಮೂಡಿಸಿವೆ. ಈ ಪೈಕಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ಪೇದೆ ಮೇ 2ರಂದು ಸರ್ಕಾರಿ ಪ್ರಯೋಗಾಲಯದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಸೋಂಕು ಇದೆ ಎಂದು ವರದಿಯಿಂದ ತಿಳಿದು ಬಂದಿತ್ತು. ಎನ್‍ಐವಿ ರಾಜ್ಯ ಘಟಕದ ಪ್ರಯೋಗಾಲಯದಲ್ಲಿ ಮತ್ತೆ ಪರೀಕ್ಷೆ ಮಾಡಿದಾಗ ನೆಗೆಟಿವ್ ಎಂದು ವರದಿ ಬಂದಿದೆ. ಪೇದೆಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ ದಿನವೇ ಅವರದ್ದೇ ಹೆಸರಿನ ಮತ್ತೊಬ್ಬ ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಈ ಎರಡೂ ಮಾದರಿಗಳನ್ನು ಬೆಂಗಳೂರಿನ ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಹೆಸರಿನ ಗೊಂದಲದಿಂದಾಗಿ ಪೇದೆಗೆ ಸೋಂಕು ಇದೆ ಎಂದು ತಪ್ಪಾಗಿ ತಿಳಿಯಲಾಗಿತ್ತು. ಆದರೆ ಅದೇ ಹೆಸರಿನ ಮತ್ತೊಬ್ಬ ವ್ಯಕ್ತಿಗೆ ಸೋಂಕು ಇತ್ತು.