ಬೆಂಗಳೂರು:ಅರ್ಧಕ್ಕೂ ಹೆಚ್ಚು ಪ್ರಮುಖ ಇಲಾಖೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. 17 ಮಂದಿಗೆ ಮೂವರು ಉಪಮುಖ್ಯಮಂತ್ರಿ ಆಗಿದ್ದಾರೆ. ಉಳಿದ 17ಕ್ಕೆ ಇನ್ನೂ ಮೂವರು ಡಿಸಿಎಂ ಆಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಹೋದಲೆಲ್ಲ ಶಾಸಕರು ಬೆಂಬಲಿಸುತ್ತಿಲ್ಲ. ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ವಪಕ್ಷ ಸಭೆ ಕರೆದಿಲ್ಲ. ಕೇಂದ್ರದಿಂದ ಅನುದಾನ ಬಂದಿಲ್ಲ, ರಾಷ್ಟ್ರೀಯ ವಿಪತ್ತು ಎಂದು ಘೋಷಣೆಯಾಗಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಹಿಟ್ಲರ್ ಆಡಳಿತವಿರುವ ಕಾರಣ ಬಿಜೆಪಿ ಆಡಳಿತ ಯಂತ್ರ ಸಂಪೂರ್ಣ ನಾಶವಾಗಿದೆ ಎಂದು ಆರೋಪಿಸಿದರು.
ಇದರಿಂದ ಸರ್ಕಾರದ ನಿಲುವು, ವಿರೋಧ ಪಕ್ಷಕ್ಕೆ ನೀಡದ ಗೌರವ ಖಂಡಿಸಿ ನಾಡಿದ್ದು (ಆಗಸ್ಟ್ 29) ಬೆಳಗ್ಗೆ10ರಿಂದ ಸಂಜೆ 6ಗಂಟೆ ತನಕ ಮೌರ್ಯ ವೃತ್ತದಲ್ಲಿ ಸತ್ಯಗ್ರಹ ನಡೆಸುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಧಾನಿಗೆ ವರದಿ:ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವರದಿಯನ್ನು ಶೀಘ್ರದಲ್ಲೇ ರಾಜ್ಯಪಾಲರಿಗೆ ನೀಡಲಿದ್ದೇವೆ. ಅವರ ಮೂಲಕ ಪ್ರಧಾನಿ ಮೋದಿಗೆ ವರದಿ ಒಪ್ಪಿಸುತ್ತೇವೆ. ಜನರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ, ರಾಜ್ಯದ ಕಾರ್ಯಕರ್ತರನ್ನು ಒಗ್ಗೂಡಿಸಿ ದಿಲ್ಲಿಯ ಜಂತರ್ ಮಂತರ್ಗೆ ತೆರಳಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಅತಿವೃಷ್ಟಿ ಜೊತೆಗೆ ಬರ ತೀವ್ರ ತಾಂಡವಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಕೆಟ್ಟ ಆಡಳಿತ ನಡೆಸುತ್ತಿರುವುದು ಬೇಸರದ ಸಂಗತಿ. ಮೈತ್ರಿ ಸರ್ಕಾರ ಬೀಳಿಸಲು ನಾನಾ ತಂತ್ರಗಳನ್ನು ನಡೆಸಿದ್ರು. ಸುಖಾ ಸುಮ್ಮನೆ ಆರೋಪ ಮಾಡುತ್ತಾ, ಆಪರೇಷನ್ ಕಮಲ ಮಾಡಿ ಅದರಲ್ಲಿ ಯಶಸ್ವಿಯಾಗಿ ಭ್ರಷ್ಟಾಚಾರದಿಂದ ಸರ್ಕಾರ ರಚಿಸಿಕೊಂಡರು ಎಂದು ಟೀಕಿಸಿದರು.
ಗೆಲ್ಲದ ಮತ್ತು ಹಲವಾರು ಆರೋಪಗಳಿರುವ ವ್ಯಕ್ತಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಿದ್ದಾರೆ. ಈಶ್ವರಪ್ಪ, ಅಶೋಕ್ ಅವರು ಇದನ್ನು ಒಪ್ಪಿಕೊಳ್ಳಬಾರದು. ಹಿರಿಯರಾದ ಜಗದೀಶ್ ಶೆಟ್ಟರ್ ಅವರಿಗೆ ನೀಡಬೇಕಾಗಿತ್ತು. ಹಿಟ್ಲರ್ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ದೆಹಲಿಯಿಂದ ಬರುವ ಆದೇಶಕ್ಕೆ ಯಡಿಯೂರಪ್ಪ ತಲೆದೂಗಬೇಕಾಗಿದೆ ಎಂದರು.