ಕರ್ನಾಟಕ

karnataka

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್​ ಕಾಲೇಜು, ಐಟಿಐ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​: ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ

By

Published : Dec 12, 2019, 8:15 PM IST

ಜನವರಿ 20 ರಿಂದ 30 ರ ವರೆಗೆ ಬೆಂಗಳೂರಿನಲ್ಲಿ ವಿಧಾನಸಭೆ ಜಂಟಿ ಅಧಿವೇಶನ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ.

ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ
ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ

ಬೆಂಗಳೂರು: ಜನವರಿ 20 ರಿಂದ 30 ರ ವರೆಗೆ ಬೆಂಗಳೂರಿನಲ್ಲಿ ವಿಧಾನಸಭೆ ಜಂಟಿ ಅಧಿವೇಶನ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ.

ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿ

ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಜನವರಿ 20-30 ರ ವರೆಗೆ ರಜಾ ದಿನ ಹೊರತುಪಡಿಸಿ ಒಟ್ಟು 10 ದಿನಗಳ ಕಾಲ ಜಂಟಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ರು.

ಇನ್ನು, ಇದೇ ವೇಳೆ ಬಿಡಿಎ ಬಡಾವಣೆಯಲ್ಲಿನ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸುವ ಸಂಬಂಧ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸುಮಾರು 5,000 ಎಕರೆ ಬಡಾವಣೆ ವ್ಯಾಪ್ತಿಯಲ್ಲಿ ಸುಮಾರು 75,000 ಅನಧಿಕೃತ ಕಟ್ಟಡಗಳಿವೆ. ದಂಡ ವಿಧಿಸಿ ಸಕ್ರಮಗೊಳಿಸಬೇಕಾ? ಎಂಬ ಬಗ್ಗೆ ಪರಿಶೀಲಿಸಿ ಅಧಿನಿಯಮ 38 ಸಿ ತಿದ್ದುಪಡಿ ತರಲು ಸಮಿತಿ ರಚನೆಗೆ ನಿರ್ಧರಿಸಲಾಗಿದೆ. ಡಿಸಿಎಂ ಅಶ್ವತ್ಥ ನಾರಾಯಣ್ ನೇತೃತ್ವದ ಸಮಿತಿಯಲ್ಲಿ ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಸುರೇಶ್ ಕುಮಾರ್ ಇರಲಿದ್ದಾರೆ ಎಂದು ವಿವರಿಸಿದರು.

ಇನ್ನು, ಜಾತಿ ಸಮೀಕ್ಷೆಯೂ ಇಂದು ನಡೆದ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿದೆ. ಆದರೆ ವರದಿ ಬಗ್ಗೆ ಚರ್ಚೆ ನಡೆಸದೆ, ಅದನ್ನು ಮುಂದೂಡಲಾಗಿದೆ‌.

ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು:

1) ಆರ್ಯ ವೈಶ್ಯ ಸಮಾಜದವರಿಗೆ ಜಾತಿ ಪ್ರಮಾಣಪತ್ರ ನೀಡಲು ತೀರ್ಮಾನ

2) ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ 525 ಕೋಟಿ ರೂ. ಅನುದಾನ ನೀಡಲು ಅಸ್ತು

3) ಐಟಿಐ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 5,331 ಲ್ಯಾಪ್ ಟಾಪ್ ನೀಡಲು 16.98 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ

4) ಎಸ್. ಸಿ. ಎಸ್​ ಟಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸಂಪುಟ ಉಪಸಮಿತಿ ರಚನೆಗೆ ತೀರ್ಮಾನ. ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆ

5) ಪಟ್ಟದ ಕಲ್ಲು ವಿಶ್ವದರ್ಜೆ ಪ್ರವಾಸಿ ತಾಣ ಮಾಡಲು ಮೂಲಸೌಕರ್ಯ ಅಭಿವೃದ್ಧಿಗಾಗಿ 24 ಎಕರೆ ಜಮೀನು ಖರೀದಿಸಿ ಟೂರಿಸಂ ಪ್ಲಾಜಾ ನಿರ್ಮಾಣಕ್ಕೆ 29 ಕೋಟಿ ರೂ.ಗೆ ಅಸ್ತು

6) ಅಂಗನವಾಡಿ ಸಹಾಯಕರಿಗೆ ಸಮವಸ್ತ್ರ ಖರೀದಿಸಲು 10.27 ಕೋಟಿ ರೂ. ಅನುದಾನ ನೀಡಲು ಅಸ್ತು. ಕೈ ಮಗ್ಗ ಅಭಿವೃದ್ದಿ ನಿಗಮದಿಂದ 2,56, 987 ಸಮವಸ್ತ್ರ ಕೊಡಲು ತೀರ್ಮಾನ.

7) ವಿಕಲಚೇತನರಿಗೆ ದ್ವಿಚಕ್ರ ವಾಹನ‌ ಖರೀದಿಸಲು 15 ಕೋಟಿ ರೂ. ಅನುದಾನ. 2000 ದ್ವಿಚಕ್ರ ವಾಹನಗಳನ್ನು ಖರೀದಿಸಲು ತೀರ್ಮಾನ

8) ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 2020 ರವರೆಗೆ ಎಲ್ ಐಸಿ ಪಾಲುದಾರರಾಗಿರಲು ನಿರ್ಧಾರ

9) ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ‌ ವಸತಿ ನಿಲಯ ಕಟ್ಟಲು 15 ಕೋಟಿ ರೂ. ಅನುದಾನ ನೀಡಲು ಅಸ್ತು

10) ಧರ್ಮಸ್ಥಳ ನೆರಿಯಾ ಹೊಳೆಗೆ ಕಿಂಡಿ ಅಣೆಕಟ್ಟು ಕಟ್ಟಲು 14.97 ಕೋಟಿ ರೂ.

11) ನಂದಿ ಬೆಟ್ಟದಲ್ಲಿ ಉಗಮಿಸುವ ದಕ್ಷಿಣ ಪಿನಾಕಿನಿ ನದಿಯ ಪುನರುಜ್ಜೀವಕ್ಕಾಗಿ ಅಜೀಂ ಪ್ರೇಮ್‌ಜಿ ಫೌಂಡೇಷನ್, ಟಾಟಾ ಟ್ರಸ್ಟ್, ಇನ್ಫೋಸಿಸ್ ಫೌಂಡೇಶನ್ ಸೇರಿದಂತೆ ಖಾಸಗಿಯವರು ಟ್ರಸ್ಟ್ ರಚಿಸಿ, ಅದರ ಮೂಲಕ 2,600 ಕೋಟಿ ಹಣ ಸಂಗ್ರಹಿಸುವ ಸಂಬಂಧ ಸಮಾಲೋಚನೆ

12) ಬಿಡಿಎ ಪೆರಿಫರೆಲ್ ರಿಂಗ್ ರಸ್ತೆ ನಿರ್ಮಾಣಕ್ಕಾಗಿ ಜೈಕಾ ಜತೆ ಮಾತುಕತೆ ನಡೆಸಲು ಸಂಪುಟ ಅಸ್ತು. ಮೊದಲ ಹಂತವಾಗಿ ತುಮಕೂರು-ಬಳ್ಳಾರಿ ರಸ್ತೆ ವರೆಗಿನ 1746.05 ಕೋಟಿ ರೂ‌., ಎರಡನೇ ಹಂತವಾಗಿ 1417.35 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿ- ಹಳೆ‌‌ ಮದ್ರಾಸ್​ ರಸ್ತೆ, ಮೂರನೇ ಹಂತದಲ್ಲಿ ಹಳೆ‌ ಮದ್ರಾಸ್ - ಹೊಸೂರು ರಸ್ತೆವರೆಗೆ 2,453 ಕೋಟಿ ರೂ. ವೆಚ್ಚದಲ್ಲಿ ಒಟ್ಟು 65.5 ಕಿ.ಮೀ. ರಸ್ತೆ ನಿರ್ಮಿಸಲು ಯೋಜನೆ. ಇದಕ್ಕಾಗಿ 67 ಗ್ರಾಮಗಳಿಂದ 1,810 ಎಕರೆ ಜಮೀನು ಭೂಸ್ವಾಧೀನ ಮಾಡಬೇಕಾಗಿದ್ದು, ಆ ಪೈಕಿ 901.74 ಕೋಟಿ ರೂ. ಪಾಲನ್ನು ಸರ್ಕಾರ ಭರಿಸಲಿದೆ‌.

ABOUT THE AUTHOR

...view details