ಬೆಂಗಳೂರು: ಐದು ವರ್ಷದ ಮಗುವಿನ ಮೇಲೆ ಪಶ್ಚಿಮ ಬಂಗಾಳ ಮೂಲದ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರಿನ ಸಂಜಯನಗರದ ಗೆದ್ದಲಹಳ್ಳಿಯಲ್ಲಿ ಭಾನುವಾರ ರಾತ್ರಿ ಬೆಳಕಿಗೆ ಬಂದಿದೆ.
ಕಾನೂನು ಕೈಗೆತ್ತಿಕೊಳ್ಳಲು ಮುಂದಾದ ಸಾರ್ವಜನಿಕರು:
ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಮಗುವಿನ ಪೋಷಕರು ಮತ್ತು ಸ್ಥಳೀಯರು ಸಂಜಯನಗರ ಠಾಣೆ ಎದುರು ಜಮಾಯಿಸಿ ತಡರಾತ್ರಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ ಠಾಣೆಯ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಕಟ್ಟಡ ನಿರ್ಮಾಣ ಕಾರ್ಮಿಕ:
ಆರೋಪಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದು, ಗೆದ್ದಲಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಆರೋಪಿ ಮನೆಯ ಪಕ್ಕದಲ್ಲೇ ಭಾನುವಾರ ಸಂಜೆ ಆಟವಾಡುತ್ತಿದ್ದ ಮಗುವಿಗೆ ಯೂಟ್ಯೂಬ್‌ನಲ್ಲಿ ಕಾರ್ಟೂನ್ ತೋರಿಸುವುದಾಗಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಸಂಜೆ ಮನೆಗೆ ಬಂದ ಮಗುವಿನ ವರ್ತನೆ ನೋಡಿ ಅನುಮಾನಗೊಂಡು ಪೋಷಕರು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಈ ಸಂಬಂಧ ಪೋಷಕರು ದೂರು ನೀಡಿದ ಕೂಡಲೇ ಸಂಜಯನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಬಣ ಎಂಟ್ರಿ:
ಇನ್ನು ಘಟನೆಯಿಂದ ಆಕ್ರೋಶಗೊಂಡ ನೂರಾರು ಸ್ಥಳೀಯರು ಪೊಲೀಸ್ ವಾಹನವನ್ನು ಹಿಂಬಾಲಿಸಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ತಡರಾತ್ರಿ ಗಲಾಟೆ ಮಾಡಿದರು. ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಬಣದ ಸದಸ್ಯರು ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದರಿಂದ ಪ್ರತಿಭಟನೆ ಕಾವು ಹೆಚ್ಚಾಗಿತ್ತು. ಆರೋಪಿಯನ್ನು ನಮಗೆ ಒಪ್ಪಿಸಿ, ನಾವೇ ಬುದ್ದಿ ಕಲಿಸುತ್ತೇವೆ ಎಂದು ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ, ಹೆಚ್ಚಿನ ಭದ್ರತೆಗಾಗಿ ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು.
ಪ್ರತಿಭಟನಾಕಾರ ಮನವೊಲಿಸಿದ ಬೈರತಿ ಸುರೇಶ್
ಈ ಮಧ್ಯೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಪ್ರಯೋಜನವಾಗಿರಲಿಲ್ಲ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಸಾರ್ವಜನಿಕರ ಮನವೊಲಿಸಿ ಕಳುಹಿಸಿದರು.