ಬೆಂಗಳೂರು: ಪೊಲೀಸರ ವೇಷದಲ್ಲಿ ಬಂದು ಪ್ರೇಮಿಗಳು ಹಾಗೂ ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮೂವರನ್ನು ತಲಘಟ್ಟಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಲಘಟ್ಟಪುರದ ನಿವಾಸಿ ಶಿವಕುಮಾರ್, ಪ್ರವೀಣ್ ಕುಮಾರ್, ರಘು ಬಂಧಿತರು. ಈ ಆರೋಪಿಗಳಿಂದ 3.10 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 1.50 ಲಕ್ಷ ರೂ., 1 ಬೇಡಿ, 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ದರೋಡೆ, ಸುಲಿಗೆ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನಗರದ ಹೊರವಲಯದ ರಸ್ತೆಗಳಲ್ಲಿ ಏಕಾಂತವಾಗಿ ಮಾತನಾಡುತ್ತಿದ್ದ ಯುವ ಪ್ರೇಮಿಗಳ ಬಳಿ ಹೋಗಿ ತಾವು ಪೊಲೀಸರೆಂದು ಹೇಳಿ ನಕಲಿ ಪೊಲೀಸ್ ಗುರುತಿನ ಚೀಟಿ, ನಕಲಿ ಹ್ಯಾಂಡ್‍ಕಪ್ ತೋರಿಸಿ ಅವರಿಂದ ಚಿನ್ನದ ಸರ, ಹಣ ಹಾಗೂ ಮೊಬೈಲ್‍ಗಳನ್ನು ಸುಲಿಗೆ ಮಾಡಿ ಪರಾರಿಯಾಗುತ್ತಿದ್ದರು. ಇವರ ವಿರುದ್ಧ ಈ ಹಿಂದೆ ತಲಘಟ್ಟಪುರ, ರಾಮನಗರ, ಕಗ್ಗಲೀಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಬಂಧಿತರಾಗುವ ಆರೋಪಿಗಳು ಜೈಲಿಗೆ ಹೋಗಿ ಬಳಿಕ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಹಳೆ ಚಾಳಿಯನ್ನೇ ಮುಂದುವರೆಸುತ್ತಿದ್ದರು.