ಕರ್ನಾಟಕ

karnataka

ETV Bharat / city

ಅರ್ಕಾವತಿ ಅರ್ಜಿದಾರರಿಗೆ ಸಿಹಿ ಸುದ್ದಿ: ಹೊಸ ವರ್ಷ ಆರಂಭದ ವೇಳೆ ಕೈ ಸೇರಲಿವೆ ನಿವೇಶನ

ಹೊಸ ವರ್ಷದ ವೇಳೆಗೆ ಅಥವಾ ಜನವರಿ ಅಂತ್ಯದ ವೇಳೆಗೆ ಅರ್ಕಾವತಿಯಲ್ಲಿ ಲಭ್ಯವಿರುವ ನಿವೇಶನಗಳನ್ನು ನಾಗರಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ಬಿಡಿಎ ಅಧ್ಯಕ್ಷರು ತಿಳಿಸಿದ್ದಾರೆ.

arkavathy site distribution
ಅರ್ಕಾವತಿ

By

Published : Dec 15, 2020, 7:21 PM IST

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಸಿಗದೇ ಪರದಾಡುತ್ತಿರುವವರಿಗೆ ಸದ್ಯದಲ್ಲೇ ಸಿಹಿ ಸುದ್ದಿ ದೊರೆಯಲಿದೆ. ನಿವೇಶನಕ್ಕಾಗಿ ಹಣ ಪಾವತಿ ಮಾಡಿರುವವರಿಗೆ ಆದ್ಯತೆ ಆಧಾರದಲ್ಲಿ ಹೊಸ ವರ್ಷಾರಂಭದ ವೇಳೆಗೆ ನಿವೇಶನ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜನವರಿ ಅಂತ್ಯದ ವೇಳೆಗೆ ಅರ್ಕಾವತಿಯಲ್ಲಿ ನಾಗರಿಕರಿಗೆ ಹಂಚಿಕೆ

ಮಂಗಳವಾರ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಡಾವಣೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು, ಹತ್ತು ಹದಿನೈದು ವರ್ಷಗಳ ಹಿಂದೆಯೇ ನಿವೇಶನಕ್ಕಾಗಿ ಹಣ ಪಾವತಿ ಮಾಡಿರುವ ಜನರು ನಿವೇಶನಕ್ಕಾಗಿ ಅಲೆಯುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಕೆಂಪೇಗೌಡ ಸೇರಿದಂತೆ ಮತ್ತಿತರ ಬಡಾವಣೆಗಳಲ್ಲಿ ಬದಲಿ ನಿವೇಶನ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಯಾವುದೇ ಕಾನೂನು ತೊಡಕು ಇಲ್ಲದಿರುವ ಪ್ರದೇಶವನ್ನು ಅಭಿವೃದ್ಧಿಪಡಿಸಿ, ನಿವೇಶನಗಳನ್ನು ರಚನೆ ಮಾಡಬೇಕು ಎಂದು ಸೂಚಿಸಿದರು.

ನಿವೇಶನಗಳನ್ನು ಅಭಿವೃದ್ಧಿಪಡಿಸಿದ ನಂತರ ಎಷ್ಟು ಜನರಿಗೆ ನಿವೇಶನಗಳನ್ನು ನೀಡಬಹುದು ಮತ್ತು ಯಾವ ಅಳತೆಯ ನಿವೇಶನಗಳನ್ನು ನೀಡಬಹುದು ಎಂಬುದರ ಬಗ್ಗೆ ವಿವರವಾದ ವರದಿಯನ್ನು ಡಿಸೆಂಬರ್ 30 ರೊಳಗೆ ಸಿದ್ಧಪಡಿಸುವಂತೆ ನಿರ್ದೇಶನ ನೀಡಿದರು.

ಈ ವರದಿ ಆಧಾರದ ಮೇಲೆ ನಿವೇಶನಗಳ ಲಭ್ಯತೆಯನ್ನು ಗಮನಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಹೊಸ ವರ್ಷದ ವೇಳೆಗೆ ಅಥವಾ ಜನವರಿ ಅಂತ್ಯದ ವೇಳೆಗೆ ಅರ್ಕಾವತಿಯಲ್ಲಿ ಲಭ್ಯ ಇರುವ ನಿವೇಶನಗಳನ್ನು ನಾಗರಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಅರ್ಕಾವತಿ ಗೊಂದಲದ ಗೂಡಾಗಿದ್ದು, ಇದರಿಂದ ಸಾವಿರಾರು ನಾಗರಿಕರು ನಿವೇಶನಕ್ಕಾಗಿ ಹಣ ಪಾವತಿ ಮಾಡಿದ್ದರೂ ನಿವೇಶನವನ್ನು ಪಡೆಯಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಬಿಡಿಎಗೆ ಕೆಟ್ಟ ಹೆಸರು ಬರುವಂತಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಸಮರ್ಪಕವಾಗಿ ಕೆಲಸ ಮಾಡಿ ನೊಂದ ನಾಗರಿಕರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ವಿಶೇಷ ತನಿಖಾ ತಂಡದಿಂದ ಅಕ್ರಮ ಪ್ರಕರಣ:

ಈ ಮಧ್ಯೆ ಬಿಡಿಎ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನಗಳನ್ನು ಹಂಚಿಕೆ ಮಾಡಲು ಯತ್ನಿಸಿದ ಪ್ರಕರಣವನ್ನು ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸದ್ಯದಲ್ಲೇ ಸರ್ಕಾರಿ ಆದೇಶ ಹೊರಬೀಳಲಿದ್ದು, ತನಿಖಾ ತಂಡವನ್ನೂ ರಚನೆ ಮಾಡಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ. ಇದರಲ್ಲಿ ಭಾಗಿಯಾಗಿರುವವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ. ಅದರಂತೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು. ಈ ಸಭೆಯಲ್ಲಿ ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ABOUT THE AUTHOR

...view details