ಬೆಂಗಳೂರು: ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಅಂಗನವಾಡಿಗಳಿಗೆ ಮೂಲಸೌಲಭ್ಯ ಒದಗಿಸಲು ಸರ್ಕಾರಗಳಿಗೆ ನಿರ್ದೇಶಿಸುವಂತೆ ಬೀದರ್ ಜಿಲ್ಲೆಯ ಗುರುನಾಥ ವದ್ದೆ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತ ವಿಚಾರಣೆಯನ್ನು ನ್ಯಾ.ಬಿ.ಎಂ ಶಾಮ್ ಪ್ರಸಾದ್ ಮತ್ತು ನ್ಯಾ.ಎಂ.ಜಿ.ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠ ನಡೆಸಿದೆ.
ರಾಜ್ಯದಲ್ಲಿರುವ ಬಡ ಮಕ್ಕಳು ಅಪೌಷ್ಠಿಕತೆಯಿಂದ ಬಳಲುವುದನ್ನು ತಡೆಗಟ್ಟಲು ಹಾಗೂ ಅಕ್ಷರಾಭ್ಯಾಸ ಮಾಡಿಸಲು ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದೆ. ಆದರೆ, ರಾಜ್ಯದ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಹೆಚ್ಚಿನ ಅಂಗನವಾಡಿಗಳು ಸರಿಯಾಗಿ ಗಾಳಿ-ಬೆಳಕಿಲ್ಲದ ಕಿರಿದಾದ ಕೋಣೆಗಳಲ್ಲಿ ನಡೆಯುತ್ತಿದ್ದು, ಮಕ್ಕಳು ಅಕ್ಷರಾಭ್ಯಾಸ ಮಾಡಲು, ಆಟವಾಡಲು ಸೂಕ್ತ ವಾತಾವರಣ ಇಲ್ಲ. ಮಕ್ಕಳಿಗೆ ಪೌಷ್ಠಿಕ ಆಹಾರವೂ ಲಭ್ಯವಾಗುತ್ತಿಲ್ಲ, ಶೌಚಾಲಯದ ವ್ಯವಸ್ಥೆಯೂ ಸರಿಯಿಲ್ಲ. ಹಲವೆಡೆ ವಿದ್ಯುತ್ ಸಂಪರ್ಕ ನೀಡಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿರುವ ಅವ್ಯವಸ್ಥೆ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತು ಬೀದರ್ ಜಿಲ್ಲಾ ಪ್ರಧಾನ ಮತ್ತು ಸತ್ತ್ರ ನ್ಯಾಯಾಧೀಶರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅರ್ಜಿದಾರರು ಅವ್ಯವಸ್ಥೆಯನ್ನು ವಿವರಿಸಿದ್ದಾರೆ.