ಬೆಂಗಳೂರು: ಇತ್ತೀಚೆಗಷ್ಟೇ ಅಗಲಿದ ನಟ ಪುನೀತ್ ರಾಜ್‌ಕುಮಾರ್ ಹೆಸರನ್ನು ರಸ್ತೆಗಳಿಗೆ ನಾಮಕರಣ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.
ಪುನೀತ್ ಮಾಡಿರುವ ಸಾಮಾಜಿಕ ಸೇವೆಗಳಿಗೆ ಗೌರವ ಸೂಚಿಸುವ ಸಲುವಾಗಿ ರಸ್ತೆಗಳಿಗೆ ಅವರ ಹೆಸರು ನಾಮಕರಣ ಮಾಡಬೇಕೆಂದು ಮಾಜಿ ಪಾಲಿಕೆ ಸದಸ್ಯ ಎನ್.ಆರ್.ರಮೇಶ್ ಕೂಡಾ ಇಂದು ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ಮನವಿ ಪತ್ರ ಸಲ್ಲಿಸಿದರು.
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ ಅಥವಾ ಬನಶಂಕರಿ ಬಸ್ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಮಾರತಹಳ್ಳಿ ಜಂಕ್ಷನ್ ಮೂಲಕ ಕೃಷ್ಣರಾಜಪುರದ ತೂಗು ಸೇತುವೆವರೆಗೆ ಹಾದುಹೋಗುವ ಔಟರ್ ರಿಂಗ್ ರಸ್ತೆಗೆ ಪುನೀತ್ ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷರಾದ ಎನ್.ಆರ್.ರಮೇಶ್ ಮನವಿ ಮಾಡಿದ್ದಾರೆ.
ರಾಜಾಜಿನಗರ ಕ್ಷೇತ್ರದ ಕಾರ್ಡ್ ರಸ್ತೆಗೆ ಪುನೀತ್ ಹೆಸರಿಡುವಂತೆ ಬೇರೆ ಸಂಘಟನೆಗಳು ಮನವಿ ಮಾಡಿದ್ದವು. ಆದರೆ ಈ ರಸ್ತೆಗೆ ಈಗಾಗಲೇ ದ.ರಾ.ಬೇಂದ್ರೆ ರಸ್ತೆ ಎಂದು ಬಿಬಿಎಂಪಿ ನಾಮಕರಣ ಮಾಡಿದೆ. ಹೀಗಾಗಿ ಮತ್ತೆ ಬೇರೆ ಹೆಸರಿಡುವುದು ಸಮಂಜಸವಲ್ಲ. ಆದರೆ ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್, ಸಿಲ್ಕ್ ಬೋರ್ಡ್ ಜಂಕ್ಷನ್ ಗಳಿಗೆ ಯಾವುದೇ ಸಾಧಕರ ಹೆಸರು ನಾಮಕರಣ ಆಗಿಲ್ಲದ ಕಾರಣ ಪುನೀತ್ ಹೆಸರಿಡಬೇಕೆಂದು ಮನವಿ ಮಾಡಿದ್ದಾರೆ.
ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರಿಡುವಂತೆ ಬಿಬಿಎಂಪಿ ಆಯುಕ್ತರಿಗೆ ಎನ್.ಆರ್.ರಮೇಶ್ ಮನವಿ ಇದನ್ನೂ ಓದಿ: ಪುನೀತ್ಗೆ ಇಷ್ಟವಾದ ತಿಂಡಿ-ತಿನಿಸು ಅರ್ಪಿಸಿ ನಮಸ್ಕರಿದ ಕುಟುಂಬ