ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನಿಂದ ಕಳೆಗುಂದಿದ್ದ ಬೆಂಗಳೂರು ಕರಗ ಮಹೋತ್ಸವವನ್ನು ಈ ಸಲ ಅದ್ಧೂರಿಯಾಗಿ ನಡೆಸಲು ಸಕಲ ತಯಾರಿ ನಡೆದಿದೆ. ಇಂದಿನಿಂದ ಐತಿಹಾಸಿಕ ಮಹೋತ್ಸವ ಶುರುವಾಗಲಿದ್ದು, ಎಂಟು ದಿನಗಳ ಕಾಲ ವಿವಿಧ ಪೂಜಾ ಕೈಂಕಾರ್ಯಗಳು ನೆರವೇರಲಿವೆ. ಇದಕ್ಕಾಗಿ ಧರ್ಮರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಬಿಬಿಎಂಪಿ ವತಿಯಿಂದ 50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತು ಪಾಲಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಆಯುಕ್ತ ಗೌರವ ಗುಪ್ತಾ, ಸಪ್ತಮಿ ದಿನವಾದ ಇಂದು ಕರಗ ಮಹೋತ್ಸವ ನಡೆಯಲಿದ್ದು, ಕರಗಶಕ್ತೋತ್ಸವ ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಕರಗ ಉತ್ಸವ ನಡೆಯುವ ಬೀದಿಗಳಲ್ಲಿ ದೀಪಗಳ ಅಳವಡಿಕೆ ವ್ಯವಸ್ಥೆಯಾಗಿದೆ. ಪಾಲಿಕೆಯ ಆರೋಗ್ಯ ಇಲಾಖೆ ವತಿಯಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ. ಭಕ್ತಾದಿಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಇ-ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ಬೆಂಗಳೂರು ಕರಗ ಎನ್ನುವುದು ಊರ ಹಬ್ಬದಂತೆ. ಇದರಲ್ಲಿ ಎಲ್ಲಾ ಧರ್ಮ, ಜಾತಿ ಜನಾಂಗದವರು ಭಾಗಿಯಾಗುತ್ತಾರೆ. ಆದರೆ, ಈ ಬಾರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಈಗಾಗಲೇ ಕೆಲ ಮುಖಂಡರೊಂದಿಗೆ ಮೊಬೈಲ್ ಕರೆಯಲ್ಲಿ ಮಾತನಾಡಿರುವ ನಾನು, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದ್ದೇನೆ ಹೇಳಿದರು.