ಬೆಂಗಳೂರು :ಕೃಷಿ ಯಂತ್ರೋಪಕರಣ ಸಹಾಯಧನವನ್ನು ನಿಲ್ಲಿಸಿಲ್ಲ ಹಾಗೂ ಅನುದಾನವನ್ನೂ ಕಡಿತ ಮಾಡಿಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು. ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಕ್ತ ಸಾಲಿನಲ್ಲಿ 404 ಕೋಟಿ ರೂ. ಸಹಾಯಧನ ನೀಡಲಾಗಿದೆ. ಕೃಷಿ ಹೊಂಡ ಯೋಜನೆ 2020ರಲ್ಲಿ ನಿಲ್ಲಿಸಲಾಗಿದೆ. ಈಗ ನರೇಗಾ ಯೋಜನೆಯಡಿ ಇದನ್ನು ಮಾಡಲು ಅವಕಾಶವಿದೆ ಎಂದರು.
2018-19ರಲ್ಲಿ ಕೇಂದ್ರ ಸರ್ಕಾರದಿಂದ 2001 ಕೋಟಿ ರೂ. ಹಾಗೂ 1299 ಕೋಟಿ ರಾಜ್ಯ ಸರ್ಕಾರದ ಪಾಲು ಸಂಪೂರ್ಣ ಬಿಡುಗಡೆಯಾಗಿದೆ. 2020-21ಕ್ಕೆ 404 ಕೋಟಿ ರೂ. ಈ ವರ್ಷ ಬಿಡುಗಡೆ ಮಾಡಿದ್ದೇವೆ. ಜಿಲ್ಲಾವಾರು, ತಾಲೂಕುವಾರು ಪಟ್ಟಿ ಬಿಡುಗಡೆ ಮಾಡುತ್ತೇವೆ. ಜಲಾನಯನದಲ್ಲಿ ರಾಜಸ್ಥಾನ ಬಿಟ್ಟರೆ ಹೆಚ್ಚು ಒಣ ಭೂಮಿ ಇರುವ ರಾಜ್ಯ ಕರ್ನಾಟಕವಾಗಿದೆ. ಈ ವರ್ಷ ಕೇಂದ್ರದಿಂದ 642 ಕೋಟಿ ರೂ. ಮತ್ತು ರಿಚಾರ್ಡ್ನಲ್ಲಿ 640 ಕೋಟಿ ರೂ. ಹಣ ಬಂದಿದೆ ಎಂದರು.
4,954ಹುದ್ದೆಗಳು ಖಾಲಿ :ಕೃಷಿ ಇಲಾಖೆಯಲ್ಲಿ 9,017 ಹುದ್ದೆಗಳು ಮಂಜೂರಾಗಿದ್ದವು. 4,053 ಹುದ್ದೆಗಳು ಭರ್ತಿಯಾಗಿದ್ದು, 4,954 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತ ನಂತರ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ಹೇಳಿದರು.
ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಸಭೆ : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ 11 ಜಿಲ್ಲೆಗಳಲ್ಲಿ ವಾಸಿಸುವ ಮಲೆಕುಡಿಯ ಹಾಗೂ ಇತರೆ ಬುಡಕಟ್ಟು ಜನಾಂಗದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಧಿವೇಶನದ ಬಳಿಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಶಾಸಕರ ಸಭೆ ನಡೆಸುವುದಾಗಿ ಸಾರಿಗೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ವಿಧಾನಸಭೆಯಲ್ಲಿ ಶಾಸಕ ಹರೀಶ್ ಪೂಂಜ ಅವರ ಪ್ರಶ್ನೆಗೆ ಉತ್ತರಿಸಿದರು.
ಬೆಳಗಾವಿ, ಧಾರವಾಡ, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಮೈಸೂರು, ಹಾಸನ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿರುವ ಬುಡಕಟ್ಟು ಜನಾಂಗದ ಅಭಿವೃದ್ದಿಗಾಗಿ ಕಾನೂನುಗಳಲ್ಲಿ ಮೂಲಸೌಕರ್ಯಕ್ಕಾಗಿ 3 ವರ್ಷಗಳಲ್ಲಿ 104 ಕೋಟಿ ರೂ. ಮಂಜೂರಾಗಿದೆ.