ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕ ಕೆ.ರಂಗನಾಥ್ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೆ ನಡೆದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿಯಲ್ಲಿ ಅಪಾರ ಪ್ರಮಾಣದ ಹಣ ವರ್ಗಾವಣೆ ಮಾಡಿರುವುದು ಹಾಗೂ ಬೇನಾಮಿ ಆಸ್ತಿ ಗಳಿಕೆ ಸಾಬೀತಾಗಿದೆ.
ಕೆಎಎಸ್ ಅಧಿಕಾರಿ ಕೆ.ರಂಗನಾಥ್‌ಗೆ ಸೇರಿದ ಬೆಂಗಳೂರು, ದೊಡ್ಡಬಳ್ಳಾಪುರದ 5 ಕಡೆ ಸುಮಾರು 42 ಮಂದಿ ಎಸಿಬಿ ಅಧಿಕಾರಿಗಳ 5 ತಂಡ ನಿನ್ನೆ ಬೆಳ್ಳಂಬೆಳಗ್ಗೆ ಪರಿಶೀಲನೆ ನಡೆಸಿತ್ತು. ಈ ವೇಳೆ, ರಂಗನಾಥ್ ಯಲಹಂಕ ಉಪನಗರ ಅರುಣಾ ಕೋ-ಅಪರೇಟಿವ್ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ವರ್ಗಾವಣೆ ಮಾಡಿರುವುದು ಬಹಿರಂಗಗೊಂಡಿದೆ.
ಯಲಹಂಕ ಉಪನಗರದ ಅರುಣಾ ಕೋ-ಅಪಾರೇಟಿವ್ ಬ್ಯಾಂಕ್‌ನಲ್ಲಿ ಕಳೆದ 3 ವರ್ಷಗಳಲ್ಲಿ ಕೋಟ್ಯಂತರ ರೂ. ವರ್ಗಾವಣೆ ಮಾಡಲಾಗಿದ್ದು, ತಮ್ಮ ಸಂಬಂಧಿಕರ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿರುವ ಸುಳಿವು ಸಹ ದೊರೆತಿದೆ. ಭೂ ಮಾಫಿಯಾದೊಂದಿಗೆ ಶಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಜಮೀನು ನೀಡಿರುವುದಕ್ಕೆ ಸಂಬಂಧಿಸಿದ 16 ಕಡತಗಳನ್ನು ಇವರ ಕಚೇರಿಯಿಂದ ಎಸಿಬಿ ಜಪ್ತಿ ಮಾಡಿದೆ.
ಕೆ.ರಂಗನಾಥ್ ಮನೆಯಲ್ಲಿ ಪರಿಶೀಲನೆ ನಡೆಸಿದ ಎಸಿಬಿ ಅಧಿಕಾಗಳು ಜಾರಿ ನಿರ್ದೇಶನಾಲಯದಿಂದಲೂ ತನಿಖೆ ಸಾಧ್ಯತೆ: ಕೋಟ್ಯಂತರ ರೂ. ಹಣ ವರ್ಗಾವಣೆ ಎಸಿಬಿ ತನಿಖೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವೂ (ಇಡಿ) ಪ್ರಕರಣದಲ್ಲಿ ಎಂಟ್ರಿ ಆಗುವ ಸಾಧ್ಯತೆಗಳು ದಟ್ಟವಾಗಿದೆ. ಎಸಿಬಿಯಿಂದ ಇಡಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡು ಇಸಿಐಆರ್ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.
ಇದನ್ನೂ ಓದಿ:ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆಯ ಶಿಖರದತ್ತ ಹುಬ್ಬಳ್ಳಿ ಹೈದನ ದಿಟ್ಟ ಹೆಜ್ಜೆ: ದೇಹದಲ್ಲಿವೆ 6,500ಕ್ಕೂ ಹೆಚ್ಚು ಹೊಲಿಗೆ!