ಬೆಂಗಳೂರು: ಪ್ರತಿ ವಿಷಯದಲ್ಲೂ ರಾಜಕಾರಣ ಬೇಡ. ಸರ್ಕಾರದ ಪ್ರತಿ ಯೋಜನೆ ಅಥವಾ ಕಾರ್ಯಕ್ರಮವನ್ನು ವಿರೋಧಿಸುವುದೇ ವಿರೋಧ ಪಕ್ಷದ ಕಾಯಕವಾಗಬಾರದು. ಸರ್ಕಾರದ ವಿರುದ್ಧದ ಟೀಕೆಯಲ್ಲಿ ಸದಾ ಕಾಲ ಜನಹಿತ ಹಾಗೂ ರಾಷ್ಟ್ರಹಿತ ಅಡಗಿರಬೇಕು ಎಂದು ಬೇಲಿ ಮಠದ ಶಿವರುದ್ರ ಸ್ವಾಮೀಜಿ ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಹಯೋಗದೊಂದಿಗೆ ಡಾ.ಮಹಾಂತ ಶಿವಯೋಗಿಗಳ 97 ನೇ ಜನ್ಮ ದಿನಾಚರಣೆ ನಡೆಯಿತು.
ಇಳಕಲ್ಲ ಚಿತ್ತರಗಿಯ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ಧೂಮಪಾನ-ಮದ್ಯಪಾನದಂತಹ ದುಶ್ಚಟಗಳು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಮದ್ಯಪಾನ ಮಾಡಿ ಮಧ್ಯ ವಯಸ್ಸಿನಲ್ಲಿಯೇ ಮರಣ ಹೊಂದಿದವರ ಹಲವು ನಿದರ್ಶನಗಳು ನಮ್ಮ ಮುಂದಿವೆ. ನಲವತ್ತೆಂಟು ವರ್ಷಗಳ ಹಿಂದೆ ಹುನಗುಂದ ಮನೆಯೊಂದರಲ್ಲಿ ನಲವತ್ತು ವರ್ಷ ದಾಟದ ವ್ಯಕ್ತಿಯೊಬ್ಬ ಮದ್ಯವ್ಯಸನದಿಂದ ಮರಣ ಹೊಂದಿದ್ದನ್ನು ಕಂಡ ಡಾ. ಮಹಾಂತ ಶಿವಯೋಗಿಗಳು ಆತನ ಪತ್ನಿ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ 'ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ' ಆಂದೋಲನ ಪ್ರಾರಂಭಿಸಿ ನಲವತ್ತು ವರ್ಷ ಆಯ್ತು ಎಂದು ಸ್ಮರಿಸಿದರು.