ಕರ್ನಾಟಕ

karnataka

ETV Bharat / city

ಜನಸಾಮಾನ್ಯರಿಗೆ ತೆರಿಗೆ ಹೊರೆ ಇಲ್ಲದ 2.46 ಲಕ್ಷ ಕೋಟಿ ಗಾತ್ರದ ಬಜೆಟ್ - BS Yediyurappa's Budget

ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿಯೂ ಕೃಷಿ ಕ್ಷೇತ್ರ ನಮ್ಮ ಕೈ ಹಿಡಿದಿದ್ದು, ಕೈಗಾರಿಕಾ ಹಾಗೂ ಸೇವಾ ವಲಯಗಳು ಕುಸಿತ ಕಂಡಿವೆ ಎಂದ ಮುಖ್ಯಮಂತ್ರಿಗಳು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಬಜೆಟ್ ಮಂಡಿಸಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.

ಬಜೆಟ್
ಬಜೆಟ್

By

Published : Mar 8, 2021, 6:10 PM IST

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ಶಿಕ್ಷಣ, ನಗರಾಭಿವೃದ್ಧಿ, ಕೃಷಿ, ನೀರಾವರಿಗೆ ಹೆಚ್ಚಿನ ಒತ್ತು ನೀಡುವ, ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೇರದ, 2.46 ಲಕ್ಷ ಕೋಟಿ ರೂ. ಗಾತ್ರದ 2021-22 ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಮಂಡಿಸಿದರು.

ಇಂದು ಮಧ್ಯಾಹ್ನ 12.05ಕ್ಕೆ ಬಜೆಟ್ ಮಂಡಿಸಿದ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಬಜೆಟ್ ಸರಿದೂಗಿಸಲು 71 ಸಾವಿರ ಕೋಟಿ ರೂ. ಗಳಷ್ಟು ಸಾಲ ಪಡೆಯುವುದಾಗಿ ಘೋಷಿಸಿದರು.

ಬಜೆಟ್​ಗೆ ಯಾವ್ಯಾವ ಮೂಲಗಳಿಂದ ಹಣ ಹೊಂದಿಸಲಾಗುತ್ತಿದೆ ಎಂಬ ವಿವರ ನೀಡಿದ ಸಿಎಂ, ಜಿ.ಎಸ್.ಟಿ ನಷ್ಟ ಪರಿಹಾರದ ಬಾಬ್ತು ಸೇರಿದಂತೆ ಒಟ್ಟು 1,24,202 ಕೋಟಿ ರೂ. ಗಳನ್ನು ರಾಜ್ಯದ ಸ್ವಂತ ತೆರಿಗೆಗಳ ಮೂಲಕ ಸಂಗ್ರಹಿಸುವುದಾಗಿ ವಿವರ ನೀಡಿದರು.

ಇದೇ ರೀತಿ ತೆರಿಗೆಯೇತರ ರಾಜಸ್ವಗಳಿಂದ 8,258 ಕೋಟಿ ರೂ, ಕೇಂದ್ರ ತೆರಿಗೆಯ ರೂಪದಲ್ಲಿ 24,273 ಕೋಟಿ ರೂ, ಕೇಂದ್ರದ ಸಹಾಯಾನುಧಾನದ ರೂಪದಲ್ಲಿ 15,538 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಸಾಲ ಎಷ್ಟು? :ಈ ಬಾರಿ 71,332 ಕೋಟಿ ರೂ. ಸಾಲವಾಗಿ ಪಡೆಯಲಾಗುವುದು ಎಂದ ಅವರು, ಇಷ್ಟು ಮಾಡಿದರೂ ಕಳೆದ ಸಾಲಿನಲ್ಲಿ ವಿತ್ತೀಯ ನಿರ್ವಹಣಾ ಕಾಯ್ದೆಯ ನಿಯಮ ಸಡಿಲಿಸಿ ಶೇ 5 ರಷ್ಟು ಸಾಲ ಪಡೆಯಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದ್ದರೂ ಶೇ 4 ಕ್ಕೂ ಹೆಚ್ಚಿನ ಸಾಲ ಪಡೆಯದೇ ಇರಲು ತೀರ್ಮಾನಿಸಲಾಗಿದೆ ಎಂದರು.

ರಾಜ್ಯ ಮಾಡಿದ ಸಾಲದ ಮೇಲಿನ ಮರುಪಾವತಿ ಪ್ರಮಾಣ ಏರಿಕೆಯಾಗಿರುವುದನ್ನು ಪ್ರಸ್ತಾಪಿಸಿ, ಸಾಲದ ಮೇಲಿನ ಅಸಲು, ಬಡ್ಡಿ ಹಾಗೂ ಚಕ್ರಬಡ್ಡಿಗಾಗಿ ಈ ವರ್ಷ 14,565 ಕೋಟಿ ರೂ. ಪಾವತಿಸಬೇಕಾಗಿದೆ. ಕೋವಿಡ್ ಕಾರಣದಿಂದ ಕಳೆದ ಸಾಲಿನಲ್ಲಿ ಕೇಂದ್ರದಿಂದ ಬರಬೇಕಾದ ಜಿ.ಎಸ್.ಟಿ.ನಷ್ಟ ಪರಿಹಾರದ ಬಾಬ್ತು 28 ಸಾವಿರ ಕೋಟಿ ರೂ.ಗಳ ಬದಲು 20 ಸಾವಿರ ಕೋಟಿ ರೂ.ಗಳಿಗೆ ಸೀಮಿತವಾಯಿತು. ಈ ಮಧ್ಯೆ ಕೊರೊನಾ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದರೂ ಕೃಷಿ ಕ್ಷೇತ್ರದಲ್ಲಿ ಶೇ 6.4 ರಷ್ಟು ಪ್ರಗತಿ ಸಾಧ್ಯವಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಸ್ವಂತ ತೆರಿಗೆ ಸಂಗ್ರಹ ಹೇಗೆ? : ವಾಣಿಜ್ಯ ತೆರಿಗೆಗಳ ಮೂಲಕ ಅತ್ಯಂತ ಹೆಚ್ಚು ಆದಾಯ ಬರಲಿದ್ದು, ಒಟ್ಟು 76,473 ಕೋಟಿ ರೂ. ಹಣ ಈ ಬಾಬ್ತಿನಿಂದ ಲಭ್ಯವಾಗಲಿದೆ‌. ಇದರಲ್ಲಿ ಕೇಂದ್ರ ಸರ್ಕಾರ ಪಾವತಿಸುವ ಜಿ.ಎಸ್.ಟಿ ನಷ್ಟದ ಪರಿಹಾರದ ಹಣವೂ ಸೇರಿರುತ್ತದೆ ಎಂದು ವಿವರ ನೀಡಿದ ಅವರು, ಅಬಕಾರಿ ಬಾಬ್ತಿನಿಂದ ಈ ಬಾರಿ 24,580 ಕೋಟಿ ರೂ. ಲಭ್ಯವಾಗಲಿದೆ ಎಂದು ಹೇಳಿದರು.

ನೋಂದಣಿ ಮತ್ತು ಮುದ್ರಾಂಕ ಶುಲ್ಕ : ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಬಾಬ್ತಿನಡಿ 12,655 ಕೋಟಿ ರೂ‌. ಲಭ್ಯವಾಗಲಿದ್ದು, ಮೋಟಾರು ವಾಹನ ತೆರಿಗೆಗಳ ಮೂಲಕ 7,515 ಕೋಟಿ ರೂ. ಸಿಗಲಿದೆ ಎಂದು ನುಡಿದರು.

ಉಳಿದಂತೆ ಇತರ ಮೂಲಗಳಿಂದ 2,979 ಕೋಟಿ ರೂ. ರಾಜ್ಯದ ಸ್ವಂತ ತೆರಿಗೆ ಬಾಬ್ತಿನಡಿ ಲಭ್ಯವಾಗಲಿದೆ, ರಾಜ್ಯದ ಒಟ್ಟಾರೆ ಬಜೆಟ್ ಗಾತ್ರದ ಪೈಕಿ ಹೆಚ್ಚಿನ ಹಣ ಶಿಕ್ಷಣ, ನಗರಾಭಿವೃದ್ದಿ, ಜಲಸಂಪನ್ಮೂಲ ಕ್ಷೇತ್ರಗಳಿಗೆ ಬಳಕೆಯಾಗಲಿದೆ ಎಂದು ಹೇಳಿದರು.

ವೇತನ, ಭತ್ಯೆ, ಪಿಂಚಣಿ ಮತ್ತು ಸಾಲ ಮರುಪಾವತಿ ಬಾಬ್ತಿಗೆ ಶೇ 34 ರಷ್ಟು ಹಣ ಒದಗಿಸಲಾಗುತ್ತದೆ. ಉಳಿದಂತೆ ಶಿಕ್ಷಣಕ್ಕೆ ಶೇ 11, ನಗರಾಭಿವೃದ್ಧಿಗೆ ಶೇ 10, ಜಲಸಂಪನ್ಮೂಲಕ್ಕೆ ಶೇ 8 ರಷ್ಟು ಹಣ ಬಳಕೆಯಾಗುತ್ತದೆ. ಇಂಧನ ಕ್ಷೇತ್ರಕ್ಕೆ ಶೇ 6, ಗ್ರಾಮೀಣಾಭಿವೃದ್ಧಿಗೆ ಶೇ 6, ಕಂದಾಯ, ಲೋಕೋಪಯೋಗಿ, ಆರೋಗ್ಯ ಮತ್ತು ಒಳನಾಡು ಸಾರಿಗೆಗೆ ತಲಾ 4 ರಷ್ಟು ಹಣವನ್ನು ಒದಗಿಸಲಾಗುವುದು ಎಂದು ವಿವರಿಸಿದರು.

ಸಮಾಜ ಕಲ್ಯಾಣ ಮತ್ತು ಕೃಷಿ, ತೋಟಗಾರಿಕೆಗೆ ತಲಾ 3, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಸತಿ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗೆ ಶೇ 1 ರಷ್ಟು ಹಣ ಬಳಕೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಬಜೆಟ್ ರೂಪಿಸಲು ಇದ್ದ ಅಡೆತಡೆಗಳ ವಿವರ ನೀಡಿದ ಯಡಿಯೂರಪ್ಪ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯದ ಆಯವ್ಯಯವನ್ನು ರೂಪಿಸುವ ಸಂದರ್ಭ ಹಿಂದೆಂದೂ ಬಂದಿರಲಿಲ್ಲ ಎಂದು ವಿಷಾದಿಸಿದರಲ್ಲದೆ, ಇಷ್ಟರ ನಡುವೆಯೂ ಸಕಾರಾತ್ಮಕ ಧೋರಣೆಯಿಂದ ಈ ಬಜೆಟ್ ಮಂಡಿಸಿರುವುದಾಗಿ ಹೇಳಿದರು.

ABOUT THE AUTHOR

...view details