ಕರ್ನಾಟಕ

karnataka

ETV Bharat / city

ರೈತರ ಕಬ್ಬು ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ 2 ದಿನಗಳ ಗಡುವು : ಸಚಿವ ಶಂಕರ ಪಾಟೀಲ್

ಪ್ರಸ್ತಕ ಸಾಲಿನಲ್ಲಿ ರೈತರ ಕಬ್ಬಿನ ಹಣ ಪಾವತಿ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ ಹಣ ಪಾವತಿ ಮಾಡಬೇಕು. ತಪ್ಪಿದಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಎಚ್ಚರಿಕೆ ನೀಡಿದ್ದಾರೆ.

2-day deadline for sugar mills to pay farmers' sugarcane dues: Minister Shankara Patil
ರೈತರ ಕಬ್ಬು ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ 2 ದಿನಗಳ ಗಡುವು : ಸಚಿವ ಶಂಕರ ಪಾಟೀಲ್

By

Published : Oct 2, 2021, 3:41 AM IST

ಬೆಂಗಳೂರು: ಸಕ್ಕರೆ ಉದ್ಯಮವನ್ನು ಸಂರಕ್ಷಿಸಲು ಸರ್ಕಾರ ಬದ್ದವಾಗಿದ್ದು, ರೈತರ ಹಿತರಕ್ಷಣೆ ಮೊದಲ ಅದ್ಯತೆಯಾಗಿದೆ. ಸರ್ಕಾರದ ನೀತಿ ನಿಯಮಗಳನ್ನು ಪಾಲನೆ ಮಾಡಿ ಉದ್ಯಮ ನಡೆಸುವಂತೆ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಕಾರ್ಖಾನೆಗಳಿಗೆ ತಾಕೀತು ಮಾಡಿದ್ದಾರೆ.

ಪ್ರಸ್ತಕ ಸಾಲಿನಲ್ಲಿ ರೈತರ ಕಬ್ಬಿನ ಹಣ ಪಾವತಿ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ ಹಣ ಪಾವತಿ ಮಾಡಬೇಕು. ತಪ್ಪಿದಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ವಿಕಾಸಸೌಧದಲ್ಲಿ ನಿನ್ನೆ ಕರೆದಿದ್ದ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು/ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವರು, ಈಗಾಗಲೇ ವಿಜಯಪುರ ಜಿಲ್ಕೆಯ ಕಾರಜೋಳದ ಶ್ರೀಬಸವೇಶ್ವರ ಶುಗರ್ ಲಿ, ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೋರ್ ಗ್ಲೀನ್ ಶುಗರ್ಸ್ ಇವರೆಡು ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ವಸೂಲಾತಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಉಳಿದ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ ರೈತರಿಗೆ ಹಣ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಕಬ್ಬು ಕಟಾವು, ಸಾಗಾಣಿಕೆ ವೆಚ್ಚದ ಬಗ್ಗೆ ಚರ್ಚೆ:
ಇದಕ್ಕೂ ಮುನ್ನ ಸಭೆಯಲ್ಲಿ 2020-21 ನೇ ಹಂಗಾಮಿನ ಮತ್ತು ಹಿಂದಿನ ಸಾಲುಗಳ ಕಬ್ಬು ಬಿಲ್ಲು ಬಾಕಿ ಪಾವತಿಯ ಬಗ್ಗೆ 2021-22ನೇ ಕಬ್ಬು ಅರೆಯುವ ಹಂಗಾಮವನ್ನು ಪ್ರಾರಂಭಿಸಲು ಪೂರ್ವಸಿದ್ದತಾ ಯೋಜನೆಗಳು, ಕಾರ್ಖಾನೆಗಳ ಕಾರ್ಯ ವ್ಯಾಪ್ತಿಯಲ್ಲಿ 2021-22ನೇ ಹಂಗಾಮಿನಲ್ಲಿ ದೊರೆಯಬಹುದಾದ ಕಬ್ಬಿನ ಲಭ್ಯತೆಯ ಬಗ್ಗೆ ಹಾಗೂ ಕಾರ್ಖಾನೆಗಳು 2021-22ನೇ ಹಂಗಾಮಿಗೆ ಕಬ್ಬು ಸರಬರಾಜು ಸಂಬಂಧ ರೈತರೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದ ಕುರಿತು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದ ಬಗ್ಗೆ ಚರ್ಚಿಸಲಾಯಿತು.

2021-22ನೇ ಸಾಲಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ (ಎಫ್.ಆರ್.ಪಿ) ಬಗ್ಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಎಥನಾಲ್ ಹಾಗೂ ಕಬ್ಬಿನ ಉಪ-ಉತ್ಪಾದಕಗಳ ಉತ್ಪಾದನಾ ಯೋಜನೆಯ ಪ್ರಗತಿ ಬಗ್ಗೆ ಪರಿಶೀಲಿಸಲಾಯಿತು.

ಸಚಿವರ ಪರಿಶೀಲನೆ ಸಭೆಯಲ್ಲಿ ಕೆಳಕಂಡ ಕಾರ್ಖಾನೆಗಳು 2020-2021 ಸಾಲಿನಲ್ಲಿ ರೈತರ ಕಬ್ಬಿನ ಬಿಲ್ಲು ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿತ್ತು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಕಂಪನಿ ಸೇರಿದಂತೆ 7 ಕಂಪನಿಗಳು ಕೋಟಿ ಕೋಟಿ ಬಾಕಿ ಉಳಿಸಿಕೊಂಡಿವೆ.


1. ಸೋಮೇಶ್ವರ ಎಸ್‌ಎಸ್.ಕೆ. ಲಿಮಿಟೆಡ್, ಬೈಲಹೊಂಗಲ, ಬೆಳಗಾವಿ, 69.00 ಲಕ್ಷ ರೂ. ಬಾಕಿ.
2. ಜಮಖಂಡಿ ಶುಗರ್ಸ್ ಲಿ, ಹಿರೆಪಾದಸಲಗಿ, ಜಮಖಂಡಿ, ಬಾಗಲಕೋಟೆ, 1.05 ಕೋಟಿ ರೂ.
3. ನಿರಾಣಿ ಶುಗರ್ಸ್ ಲಿ.,ಮುಧೋಳ ತಾ:,ಬಾಗಲಕೋಟೆ, 5.67 ಕೋಟಿ ರೂ.
4. ಶ್ರೀ ಸಾಯಿಪ್ರಿಯಾ ಶುಗರ್ಸ್ ಲಿ., ಹಿಪ್ಪರಗಿ, ಬಾಗಲಕೋಟೆ, 4.15 ಕೋಟಿ ರೂ.
5. ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಲಿ., ಬೀದರ್, 2.09 ಕೋಟಿ ರೂ.
6. ಶ್ರೀ ಬಸವೇಶ್ವರ ಶುಗರ್ಸ್ ಲಿ. ಕಾರಜೋಳ, ವಿಜಯಪುರ ಜಿಲ್ಲೆ, 22.11 ಕೋಟಿ ರೂ.
7. ಕೋರ್ ಗ್ಲೀನ್ ಶುಗರ್ಸ್ ಅಂಡ್ ಫ್ಯೂಎಲ್ಸ್ ಪ್ರೈವೇಟ್ ಲಿ, ಶಹಾಪುರ, ಯಾದಗಿರಿ, 6.41 ಕೋಟಿ ರೂ.

ABOUT THE AUTHOR

...view details