ಬೆಂಗಳೂರು: ಅಂತಾರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಸಾಗಣೆ ವಿರೋಧಿ ದಿನದ ನಿಮಿತ್ತ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಲಿಕಾನ್ ಸಿಟಿಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.
ಈ ವೇಳೆ ಮಾತನಾಡಿದ ಆಯುಕ್ತರು, ಇತ್ತೀಚೆಗೆ ಡ್ರಗ್ಸ್ ಸಾಮಾಜಿಕ ಪಿಡುಗಾಗಿದ್ದು, ಈ ಪಿಡುಗಿಗೆ ಹೆಚ್ಚಾಗಿ ವಿದ್ಯಾರ್ಥಿಗಳು, ಯುವಜನತೆ ಹಾಗೂ ಸುಶಿಕ್ಷಿತರು ಗುರಿಯಾಗುತ್ತಿದ್ದಾರೆ. ಹೀಗಾಗಿ ನಗರ ಪೊಲೀಸ್ ಇಲಾಖೆ ಡ್ರಗ್ಸ್ ಸರಬರಾಜು, ಡ್ರಗ್ಸ್ ಮಾರಾಟ ಹಾಗೂ ಡ್ರಗ್ಸ್ ಸೇವನೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಕೋವಿಡ್ ಇದ್ದರೂ ಅಂತಹವರ ವಿರುದ್ಧ ಕ್ರಮ ಕೈಗೊಂಡು, ಡ್ರಗ್ ವಿಚಾರವನ್ನು ಗಂಭೀರವಾಗಿ ತೆಗದುಕೊಂಡು ತನಿಖೆ ಮಾಡುವಂತೆ ತಿಳಿಸಿದೆ. ಹೀಗಾಗಿ ನಮ್ಮ ವಿಶೇಷ ತಂಡ ಇದಕ್ಕೆಂದೇ ಕಾರ್ಯ ನಿರ್ವಹಿಸುತ್ತಿದೆ.
2019-20ರಲ್ಲಿ ನಗರ ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ 1,174 ಪ್ರಕರಣ ದಾಖಲಿಸಿ, 1,801 ದೇಶಿಯರು ಹಾಗೂ 44 ವಿದೇಶಿಗರನ್ನು ದಸ್ತಗಿರಿ ಮಾಡಿದೆ. ಅವರಿಂದ 1,016 ಕೆಜಿ ಗಾಂಜಾ, 2.9 ಕೆಜಿ ಅಫೀಮು,1.15 ಕೆಜಿ ಆಶೀಷ್, 85ಗ್ರಾಂ ಚರಸ್, 345 ಗ್ರಾಂ ಕೊಕೇನ್, 1,079 ಕೆಜಿ ಕೆಮಿಕಲ್ ಡ್ರಗ್ ಟ್ಯಾಬ್ಲೆಟ್ ಹಾಗೂ ಬ್ರೌನ್ ಶುಗರ್ ವಶಪಡಿಸಿದ್ದಾರೆ.