ಬೆಂಗಳೂರು: ರಾಜಧಾನಿಯ ಪ್ರಸಿದ್ಧ ಹಾಗೂ ದೊಡ್ಡ ಆಸ್ಪತ್ರೆಗಳಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯು ಒಂದು. ಕೇವಲ ಬೆಂಗಳೂರಿಗರು ಮಾತ್ರವಲ್ಲದೇ ಪಕ್ಕದ ರಾಜ್ಯದವರು ಇಲ್ಲಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಾರೆ. ಈ ಪ್ರಸಿದ್ಧ ಕಣ್ಣಿನ ಆಸ್ಪತ್ರೆ ಇದೀಗ 125 ವರ್ಷಗಳ ಸಂಭ್ರಮದಲ್ಲಿದೆ.
125ನೇ ವರ್ಷದ ಸಂಭ್ರಮಾಚರಣೆ:
ಇಂದು (ಮಂಗಳವಾರ) ಬೆಳಗ್ಗೆ 10.30ಕ್ಕೆ 125ನೇ ವರ್ಷದ ಸಂಭ್ರಮಾಚರಣೆ ನಡೆಯಲಿದೆ. ಲಕ್ಷಾಂತರ ಜನರ ಬಾಳಲ್ಲಿ ಬೆಳಕಾಗಿರುವ ಮಿಂಟೋ ಆಸ್ಪತ್ರೆಯೀಗ ಬಣ್ಣ ಬಣ್ಣದ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.
ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಮಿಂಟೋ ಕಣ್ಣಿನ ಆಸ್ಪತ್ರೆ ಮಿಂಟೋ ಆಸ್ಪತ್ರೆಯು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಭಾಗವಾಗಿದ್ದು, ಇದು ವಿಶ್ವದ ಅತ್ಯಂತ ಹಳೆಯ ವಿಶೇಷ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾಗಿದೆ. ಆಸ್ಪತ್ರೆ ನಗರದ ಮಧ್ಯ ಭಾಗದಲ್ಲಿರುವ ಚಾಮರಾಜಪೇಟೆಯಲ್ಲಿದ್ದು, ಕೆ ಆರ್ ಮಾರುಕಟ್ಟೆಗೆ ಹೊಂದಿಕೊಂಡಿದೆ. ಮಿಂಟೋ ಹಿಂಭಾಗದಲ್ಲೇ ವಾಣಿವಿಲಾಸ್, ವಿಕ್ಟೋರಿಯಾ ಆಸ್ಪತ್ರೆಯೂ ಇದೆ. ಸರ್ಕಾರಿ ಹಾಗೂ ರೆಫರಲ್ ಆಸ್ಪತ್ರೆಯಾಗಿರುವ ಮಿಂಟೋ, ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಹಾಗೇ ಖಾಸಗಿ ಆಸ್ಪತ್ರೆಯಲ್ಲಿ ನಡೆಯುವ ದುಬಾರಿ ಶಸ್ತ್ರಚಿಕಿತ್ಸೆಯನ್ನು ಕೂಡ ಇಲ್ಲಿ ಕಡಿಮೆ ದರದಲ್ಲಿ ನಡೆಸಲಾಗುತ್ತದೆ.
ಹಿನ್ನೆಲೆ:
1896ರಲ್ಲಿ ಇದು ಸಣ್ಣ ಡಿಸ್ಪೆನ್ಸರಿಯಾಗಿ ಪ್ರಾರಂಭವಾಯಿತು. 1903ರಲ್ಲಿ ಆಡಳಿತಾತ್ಮಕ ಮತ್ತು ರೋಗಿಗಳ ಬ್ಲಾಕ್‌ಗೆ ಅಡಿಪಾಯ ಹಾಕಿದ್ದು ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವ್ರು. ಇದನ್ನು 1917ರಲ್ಲಿ 100 ಹಾಸಿಗೆಗಳ ಆಸ್ಪತ್ರೆಯೊಂದಿಗೆ ವಿಸ್ತರಿಸಲಾಯಿತು. ನಂತರ 1956ರಲ್ಲಿ ಬೋಧನಾ ಆಸ್ಪತ್ರೆ ಎಂದು ಗುರುತಿಸಲಾಯಿತು. ಕಾಲ ಕಳೆದಂತೆ 200 ಹಾಸಿಗೆಗಳ ಆಸ್ಪತ್ರೆಯಾದ ಮಿಂಟೋ, 1981ರಲ್ಲಿ ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಯಾಗಿ ಮೇಲ್ದರ್ಜೆಗೇರಿಸಲಾಯಿತು.
ಮಿಂಟೋ ಆಸ್ಪತ್ರೆಗೆ ಪ್ರತಿ ವರ್ಷ ಹೆಚ್ಚೆಚ್ಚು ರೋಗಿಗಳು ಬಂದು ಹೋಗುತ್ತಾರೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ ಪ್ರತಿದಿನ ಸುಮಾರು 500 ರಿಂದ 800 ಒಪಿಡಿ ರೋಗಿಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರತಿ ವರ್ಷ ಸುಮಾರು 10,000 (8000 ಕಣ್ಣಿನ ಪೊರೆ ಮತ್ತು 2000 ವಿಶೇಷ ಶಸ್ತ್ರ ಚಿಕಿತ್ಸೆ) ಮಾಡಲಾಗುತ್ತಿದೆ.
ಇದನ್ನೂ ಓದಿ:ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಚನ ಬಿಡುಗಡೆ ಮಾಡಿದ ಸಿಎಂ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲೆಯಲ್ಲಿ ವಿಶೇಷ ಚಿಕಿತ್ಸಾಲಯಗಳನ್ನು ಹೊಂದಿದೆ. ಕಾರ್ನಿಯಾ, ಐ ಬ್ಯಾಂಕ್ ಮತ್ತು ವಕ್ರೀಕಾರಕ ಶಸ್ತ್ರಚಿಕಿತ್ಸೆಗಳು, ಗ್ಲುಕೋಮಾ, ವಿಟ್ರಿಯೋ -ರೆಟಿನಾ, ಆರ್ಬಿಟ್ ಮತ್ತು ಆಕ್ಯುಲೋಪ್ಲ್ಯಾಸ್ಟಿ, ಪೀಡಿಯಾಟ್ರಿಕ್, ಸ್ಕ್ವಿಂಟ್ ಚಿಕಿತ್ಸಾ ವ್ಯವಸ್ಥೆ ಇದೆ.