ಕರ್ನಾಟಕ

karnataka

ETV Bharat / city

ಆರ್ಥಿಕ ಶಿಸ್ತು ತರಲು ಅಪ್ರಿಯವಾದರೂ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ: ಸಿಎಂ ಬೊಮ್ಮಾಯಿ

'ಕೋವಿಡ್ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಜಿಎಸ್​​​ಟಿ ಪರಿಹಾರ ಮೊತ್ತ ಮುಖ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಮುಂದುವರಿಸುತ್ತದೆ ಎಂಬ ನಂಬಿಕೆ ಇದೆ'- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

Basavaraj Bommai
ಬಸವರಾಜ ಬೊಮ್ಮಾಯಿ

By

Published : Sep 23, 2021, 8:39 PM IST

ಬೆಂಗಳೂರು:ಅಪ್ರಿಯವಾದರೂ ಆರ್ಥಿಕ ಮಿತವ್ಯಯದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ 2021-22ನೇ ಸಾಲಿನ ಪೂರಕ ಅಂದಾಜುಗಳ ಮೊದಲ ಕಂತಿನ ಬೇಡಿಕೆಗಳು ಮತ್ತು ಧನ ವಿನಿಯೋಗ ಮಸೂದೆ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ವಿಶೇಷ ಪರಿಸ್ಥಿತಿ ಇದೆ. ಕೆಲವು ಅಪ್ರಿಯವಾದರೂ ಹಣಕಾಸು ಶಿಸ್ತು ತರಲು ಕಠಿಣ ಕ್ರಮಕೈಗೊಳ್ಳುತ್ತೇನೆ.

ಈಗಾಗಲೇ ಆಡಳಿತ ವೆಚ್ಚ ಶೇ.5 ಕಡಿತಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅನುತ್ಪಾದಕ ಹಾಗು ಅನಗತ್ಯ ವೆಚ್ಚ ಕಡಿತ ಮಾಡಲಾಗುವುದು. ಈ ಸಂಬಂಧ ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು ಎಂದರು.

ಪೂರಕ ಅಂದಾಜುಗಳಲ್ಲಿ ಒಟ್ಟು 10,265 ಕೋಟಿ ರೂ.ಗಳಾಗಿದ್ದು, ಇದರಲ್ಲಿ 8,728 ಕೋಟಿ ರೂ. ರಾಜಸ್ವ ಹಾಗು ಬಂಡವಾಳ ವೆಚ್ಚ 1,536 ಕೋಟಿ ರೂ. ಸೇರಿದೆ. ಬಜೆಟ್​​ನಲ್ಲಿ ನಿಗದಿಪಡಿಸಿದ್ದಕ್ಕಿಂತ 6,367 ಕೋಟಿ ರೂ ಹೊರ ಹರಿವಿದೆ. ಇದರಲ್ಲಿ ಜಲ ಜೀವನ್ ಮಿಷನ್​​ಗೆ 1,000 ಕೋಟಿ ರೂ., ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ವೆಚ್ಚ ಭರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 1,700 ಕೋಟಿ ರೂ., ಆರೋಗ್ಯ ಇಲಾಖೆಗೆ 3,300 ಕೋಟಿ ರೂ., ಬಿಎಂಟಿಸಿಗೆ 171 ಕೋಟಿ ರೂ., ಸುಮಾರ್ಗ ಯೋಜನೆಗೆ 150 ಕೋಟಿ ರೂ. ವೆಚ್ಚಗಳು ಸೇರಿವೆ ಎಂದು ಬೊಮ್ಮಾಯಿ ವಿವರಿಸಿದರು.

ಕೇಂದ್ರ ಸರ್ಕಾರ 15,109 ಕೋಟಿ ರೂ ಜಿಎಸ್‍ಟಿ ಪರಿಹಾರ ನೀಡುವುದಾಗಿ ಹೇಳಿದೆ. ಅದರಲ್ಲಿ 8,542 ಕೋಟಿ ರೂ. ಬಿಡುಗಡೆ ಮಾಡಿದೆ. ಜಿಎಸ್​​ಟಿ ಪರಿಹಾರ ಧನ 2022ಕ್ಕೆ ಮುಕ್ತಾಯವಾಗುತ್ತದೆ. ಅದನ್ನು ಮುಂದೆಯೂ ಮುಂದುವರಿಸಬೇಕು ಎಂದು ಜಿಎಸ್​​ಟಿ ಕೌನ್ಸಿಲ್ ಸಭೆಯಲ್ಲಿ ಒತ್ತಾಯ ಮಾಡಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಜಿಎಸ್​​​ಟಿ ಪರಿಹಾರ ಮೊತ್ತ ಮುಖ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಮುಂದುವರಿಸುತ್ತದೆ ಎಂಬ ನಂಬಿಕೆ ಇದೆ ಎಂದರು.

ಆರ್ಥಿಕ ಶಿಸ್ತು ಕಾಪಾಡುವಂತೆ ಸಿದ್ದರಾಮಯ್ಯ ಸಲಹೆ:

ತೆರಿಗೆ ಕೊರತೆ ಹಾಗು ಜಿಎಸ್​​ಟಿ ಪರಿಹಾರ ಸಿಗದಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಕ್ಕೆ ಹಣಕಾಸು ಸಮಸ್ಯೆಗಳು ಎದುರಾಗಲಿದೆ. ಈ ನಿಟ್ಟಿನಲ್ಲಿ ಆರ್ಥಿಕ ಶಿಸ್ತು ಪಾಲನೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು. ‌

ಈ ವರ್ಷ ಅಬಕಾರಿ ತೆರಿಗೆ ಹೊರತುಪಡಿಸಿ ಬೇರೆ ಯಾವುದೇ ತೆರಿಗೆ ಮೂಲದಿಂದ ಆದಾಯ ಬರುತ್ತಿಲ್ಲ. 6,000 ಕೋಟಿ ಹಣವನ್ನು ಯಾವ ಮೂಲದಿಂದ ಸಂಗ್ರಹ ಮಾಡುತ್ತಾರೆ ಎನ್ನುವುದನ್ನು ತಿಳಿಸಬೇಕು. ಇಲ್ಲದಿದ್ದರೆ, ಇರುವ ಯೋಜನೆಗಳ ಅನುದಾನ ಕಡಿತ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಈಗಾಗಲೇ 4.57 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ನಾನು ಅಧಿಕಾರ ಬಿಡುವಾಗ ಸುಮಾರು 2 ಲಕ್ಷ ಕೋಟಿ ಸಾಲವಿತ್ತು. ನೀವು ಮುಖ್ಯಮಂತ್ರಿಗಳಾದ ಮೇಲೆ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ. ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕೇಂದ್ರ ಸರ್ಕಾರ 2022 ರಿಂದ ಜಿಎಸ್‍ಟಿ ಪರಿಹಾರದ ಹಣವನ್ನು ನೀಡುವುದನ್ನು ಸ್ಥಗಿತಗೊಳಿಸಲಿದೆ. ರಾಜ್ಯದ ಹಿತ ದೃಷ್ಠಿಯಿಂದ ಎಷ್ಟು ಸಾಲ ಮಾಡುತ್ತೀರಿ, ಈ ವರ್ಷ 22,000 ಕೋಟಿ ಆದಾಯ ಕೊರತೆಯಾಗಲಿದೆ. ಹೀಗಾಗಿ ಆರ್ಥಿಕ ಶಿಸ್ತು ಪಾಲನೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಇದನ್ನೂ ಓದಿ:ವಿಧಾನಸಭೆ ಕಲಾಪದಲ್ಲಿ ಶಾಸಕ ಯತ್ನಾಳ್‌ಗೆ ಕೈ ಮುಗಿದ ಸಿಎಂ ಬೊಮ್ಮಾಯಿ

ABOUT THE AUTHOR

...view details