ಬೆಂಗಳೂರು:ರಾಜ್ಯದಲ್ಲಿ ಏಪ್ರಿಲ್ ಅಂತ್ಯದ ವೇಳೆಗೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 10 ಸಾವಿರ ತಲುಪುವ ಸಾಧ್ಯತೆ ಇದ್ದು, ನಿಯಂತ್ರಣಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪ್ರಶ್ನಿಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ. ಸರ್ಕಾರದ ಪರ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ, ಪ್ರಸ್ತುತ ಕೊರೊನಾ ನಿಯಂತ್ರಣಕ್ಕೆ ಅಗತ್ಯವಿರುವ ಎನ್-95 ಮಾಸ್ಕ್, ಮೂರು ಪದರದ ಮಾಸ್ಕ್, ಪಿಪಿಇ ಕಿಟ್‍ಗಳು, ಸ್ಯಾನಿಟೈಸರ್‌ಗಳು ಸಾಕಷ್ಟು ಪ್ರಮಾಣದಲ್ಲಿ ಇವೆ.
ದಿನಕ್ಕೆ 50 ಸಾವಿರ ಲೀಟರ್ ಸ್ಯಾನಿಟೈಸರ್ ಉತ್ಪಾದಿಸಲಾಗುತ್ತಿದೆ. ಕೋವಿಡ್-19 ತಪಾಸಣೆಗೆ 11 ಸರ್ಕಾರಿ ಹಾಗೂ 4 ಖಾಸಗಿ ಸೇರಿ ರಾಜ್ಯದಲ್ಲಿ 15 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಮುಂದಿನ ಎರಡು ವಾರಗಳಲ್ಲಿ ಹೆಚ್ಚುವರಿ 5 ಲ್ಯಾಬ್ ಸ್ಥಾಪಿಸುತ್ತೇವೆ. ಕೋವಿಡ್-19 ತಪಾಸಣೆ ಹಾಗೂ ಚಿಕಿತ್ಸೆಗೆ ರಾಜ್ಯಕ್ಕೆ ಎಷ್ಟು ಐಷೋಲೇಷನ್ ಬೆಡ್ ಅಗತ್ಯವಿದೆ. ವೆಂಟಿಲೇಟರ್ ಹಾಗೂ ಇತರ ಉಪಕರಣಗಳ ಅವಶ್ಯಕತೆ ಎಷ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಅನುಗುಣವಾಗಿ ಖರೀದಿ ಮತ್ತು ತಯಾರಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈಗಾಗಲೇ 1,574 ವೆಂಟಿಲೇಟರ್‌ಗಳ ಖರೀದಿಗೆ ಆದೇಶಿಸಲಾಗಿದೆ. ಏಪ್ರಿಲ್ ಅಂತ್ಯಕ್ಕೆ 10 ಸಾವಿರ ಕೋವಿಡ್-19 ಪ್ರಕರಣಗಳ ಅಂದಾಜು ಹಾಕಿಕೊಂಡು ಅದಕ್ಕನುಗುಣವಾಗಿ ಸುರಕ್ಷತಾ ವಸ್ತುಗಳು ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪೀಠ, ಅಗತ್ಯತೆ ಮತ್ತು ಪೂರೈಕೆ ಕುರಿತು ನೀಡಿರುವ ಅಂಕಿ-ಅಂಶಗಳಲ್ಲಿ ಸಾಮ್ಯತೆ ಕಂಡು ಬರುತ್ತಿಲ್ಲ. ಇನ್ನು ಸ್ಯಾನಿಟೈಸರ್ ಉತ್ಪಾದನೆಯನ್ನು ಹೆಚ್ಚಿಸಿದ್ದೇವೆಂದು ಹೇಳಿರುವ ಸರ್ಕಾರ, ಅದನ್ನು ಅಗತ್ಯಕ್ಕನುಗುಣವಾಗಿ ವೈದ್ಯಕೀಯ ಸಿಬ್ಬಂದಿ, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿರುವ ಕುರಿತು ಖಾತರಿಪಡಿಸಬೇಕು. ಮಾಸ್ಕ್ ಮತ್ತಿತರ ಅಗತ್ಯ ವಸ್ತುಗಳನ್ನು ಸಾಧ್ಯವಾದಲ್ಲಿ ಸ್ಥಳೀಯವಾಗಿಯೇ ಉತ್ಪಾದಿಸಿಕೊಳ್ಳುವ ಸಾಧ್ಯತೆ ಕುರಿತು ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದೆ.
10 ಸಾವಿರ ಅಂದಾಜಿಗೆ ಸರ್ಕಾರದ ಸಮರ್ಥನೆ:ಇಟಲಿ, ಸ್ಪೇನ್, ಇರಾನ್ ಹಾಗೂ ಚೀನಾ ದೇಶಗಳಲ್ಲಿ ಸೋಂಕು ಹರಡಿದ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ಸರ್ಕಾರ ಯೋಜನೆ ಸಿದ್ಧಪಡಿಸಿದೆ. ಅತಿ ವೇಗವಾಗಿ ಸೋಂಕು ಹರಡಿದ ಇಟಲಿಯ ಒಂದು ನಗರದ ಪ್ರಮಾಣವನ್ನು ಆಧರಿಸಿ ಕರ್ನಾಟಕದಲ್ಲಿ ಸಂಭವನೀಯ ಪ್ರಕರಣಗಳನ್ನು ಅಂದಾಜಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.