ಹಂಪಿಯ ವಿಷ್ಣು ದೇವಾಲಯದ ಕಂಬಗಳನ್ನು ಧ್ವಂಸ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ಡಾ. ವಿಶ್ವನಾಥ ಅವರು ಉಪ ಪುರಾತತ್ವ ಅಧಿಕ್ಷಕರಿಗೆ ಮನವಿ ಸಲ್ಲಿಸಿದರು.
ಬಳ್ಳಾರಿ: ವಿಷ್ಣು ದೇವಾಲಯದ ಸಾಲು ಕಂಬಗಳನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ಡಾ. ವಿಶ್ವನಾಥ ಅವರು ಉಪ ಪುರಾತತ್ವ ಅಧಿಕ್ಷಕ ಎಂ.ಕಾಳಿಮುತ್ತು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಪುರಾತತ್ವ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು. ಕಿಡಿಗೇಡಿಗಳಿಂದ, ನಿಧಿ ಚೋರರಿಂದ ಪದೇ ಪದೇ ಹಂಪಿ ಸ್ಮಾರಕಗಳು ದಾಳಿಗೆ ತುತ್ತಾಗಿ ನಾಶವಾಗುತ್ತಿವೆ. ಹತ್ತು ವರ್ಷಗಳಿಂದ ಹಂಪಿಯ ದೇವಾಲಯ, ಗಾಳಿ ಗೋಪುರ, ಅಚ್ಯುತ ಬಜಾರಿನ ಸಾಲು ಕಂಬಗಳು, ಕೋಟಿ ಲಿಂಗ, ಶಿವಲಿಂಗ, ಈಗ ವಿಷ್ಣು ದೇವಾಲಯದ ಸಾಲು ಕಂಬಗಳು ನಿರಂತರ ನಾಶವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.