ಬಳ್ಳಾರಿ:ಕಂಪ್ಲಿ ತಾಲೂಕಿನ ಕೆಲ ಕಡೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳು ಅಡ್ಡೆ ಮೇಲೆ ಕಂದಾಯ ಇಲಾಖೆ ತಹಶೀಲ್ದಾರ್ ಗೌಸಿಯಾ ಬೇಗಂ ನೇತೃತ್ವದ ವಿವಿಧ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಸುಮಾರು 45 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿದ್ದಾರೆ.
ತಾಲೂಕಿನ ಸಣಾಪುರ ಗ್ರಾಪಂ ವ್ಯಾಪ್ತಿಯ ರಸ್ತೆ ಬದಿ ಸೇರಿದಂತೆ ಇನ್ನಿತರ ಮೂರು ಕಡೆಗಳಲ್ಲಿ ನಿಖರ ಮಾಹಿತಿ ಆಧಾರದ ಮೇಲೆ ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 1 ಟ್ರ್ಯಾಕ್ಟರ್ ಮತ್ತು 45 ಮೆಟ್ರಿಕ್ ಟನ್ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಜಪ್ತಿ ಮಾಡಿ, ಪಿಡಬ್ಲ್ಯುಡಿ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.
ಇನ್ನು ದಾಳಿ ಸಂದರ್ಭದಲ್ಲಿ ಓರ್ವ ವ್ಯಕ್ತಿ ಟ್ರ್ಯಾಕ್ಟರ್ ಮೂಲಕ ಮರಳನ್ನು ಸಾಗಣೆ ಮಾಡುತ್ತಿದ್ದದ್ದು ಕಂಡು ಬಂದಿದೆ. ಆ ಟ್ರ್ಯಾಕ್ಟರ್ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ದಂಡ ವಿಧಿಸಿ ಎಚ್ಚರಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್ ಚಾಲಕನನ್ನು ಪತ್ತೆ ಮಾಡದೇ, ಓರ್ವ ಟ್ರ್ಯಾಕ್ಟರ್ ಮಾಲೀಕನಿಗೆ 11,360 ರೂ. ದಂಡ ವಿಧಿಸಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಕಂದಾಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲು ಮಾಡದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕಂಪ್ಲಿಯ ಒಂದು ಮನೆಯ ಬಳಿಯಲ್ಲಿ ಅಕ್ರಮ ಮರಳು ದಾಸ್ತಾನು ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಗುಮಾನಿಗಳು ಪಟ್ಟಣದಲ್ಲಿ ಹರಿದಾಡುತ್ತಿವೆ. ಆದರೆ, ಈ ದಾಳಿಗೆ ಸಂಬಂಧಿಸಿದ ಮಾಹಿತಿ ನೀಡದೆ ಅಧಿಕಾರಿಗಳು ಮೌನ ವಹಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಕಾಣದ ಕೈಗಳ ಒತ್ತಡಕ್ಕೆ ಮಣಿದು, ಅಧಿಕಾರಿಗಳು ಅಕ್ರಮ ಮರಳು ದಾಸ್ತಾನು ಬಗ್ಗೆ ಮುಚ್ಚಿಟ್ಟಿದ್ದಾರಾ ಎಂಬ ಅನುಮಾನ ಮೂಡುವಂತಾಗಿದೆ.