ಬಳ್ಳಾರಿ:ಭಾರಿ ಮಳೆಯ ನಡುವೆ ಸಿರುಗುಪ್ಪ ತಾಲೂಕಿನ ರಾರಾವಿ ಸೇತುವೆ ಮೇಲೆ ಹೊರಟಿದ್ದ ಲಾರಿಯೊಂದು ನದಿಗೆ ಪಲ್ಟಿ ಹೊಡೆದಿದೆ. ಲಾರಿಯಲ್ಲಿದ್ದ ಇಬ್ಬರು ಕೊಚ್ಚಿ ಹೋಗಿ, ಒಬ್ಬ ಗಿಡವೊಂದರ ಆಸರೆ ಪಡೆದಿದ್ದರೆ, ಮತ್ತೋರ್ವ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈತನ ರಕ್ಷಣೆಗೆ ಹೋದ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸಾರ್ವಜನಿಕನೊಬ್ಬ ನದಿಯಲ್ಲಿ ಸಿಲುಕಿದ್ದಾರೆ. ಇವರಿಬ್ಬರನ್ನು ಅಗ್ನಿ ಶಾಮಕ ಸಿಬ್ಬಂದಿ ಮಧ್ಯರಾತ್ರಿ ರಕ್ಷಣೆ ಮಾಡಿದ್ದಾರೆ.
ಇನ್ನು ರಾತ್ರಿಯಿಡಿ ನದಿಯಲ್ಲಿ ಸಿಲುಕಿ ಗಿಡದ ಆಸರೆ ಪಡೆದಿದ್ದ ಲಾರಿಯ ಮಾಲೀಕ ಮಹ್ಮದ್ ಹುಸೇನ್ (65) ಎಂಬಾತನನ್ನು ಇಂದು ಬೆಳಗ್ಗೆ ರಕ್ಷಣೆ ಮಾಡಿದ್ದಾರೆ. ಲಾರಿಯ ಕ್ಲೀನರ್ ಇನ್ನೂ ಪತ್ತೆಯಾಗಿಲ್ಲ. ಇವರು ಕರ್ನೂಲ್ ಜಿಲ್ಲೆಯ ಕೊಟ್ಟೂರು ಗ್ರಾಮದವರು ಎಂದು ಹೇಳಲಾಗುತ್ತಿದೆ.
ಡಿಸಿ ಪವನ್ ಕುಮಾರ್ ಮಾಲಪಾಟಿ, ಎಸ್ಪಿ ಸೈದುಲಾ ಅಡಾವತ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ತಿಮ್ಮಾರೆಡ್ಡಿ ನಿರ್ದೇಶನದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಸಿರುಗುಪ್ಪ ಮತ್ತು ಆಂಧ್ರಪ್ರದೇಶದ ಆದೋನಿಗೆ ಸಂಪರ್ಕ ಕಲ್ಪಿಸುವ ತೀರಾ ಹದಗೆಟ್ಟ ರಾರಾವಿ ಸೇತುವೆಯ ಮೇಲೆ ವೇದಾವತಿ ನದಿ ನೀರು ಹರಿಯುತ್ತಿದೆ. ನಿನ್ನೆ ರಾತ್ರಿ ಭತ್ತಡ ತೌಡು ತುಂಬಿದ ಲಾರಿ ಸೇತುವೆ ಮೇಲೆ ಹೋದಾಗ ನದಿಯ ನೀರಿನ ರಭಸಕ್ಕೆ ನದಿಯಲ್ಲಿ ಪಲ್ಟಿ ಹೊಡೆದಿದೆ ಎನ್ನಲಾಗ್ತಿದೆ. ವಿಷಯ ತಿಳಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಅಧಿಕಾರಿಗಳು, ತಹಶೀಲ್ದಾರರು ಭೇಟಿ ನೀಡಿ ನೀರಿನಲ್ಲಿ ಸಿಲುಕಿದ್ದವರ ರಕ್ಷಣೆಗೆ ಮುಂದಾಗಿದ್ದಾರೆ.