ಬಳ್ಳಾರಿ: ಸಿರುಗುಪ್ಪ ತಾಲೂಕಿನ ಸಿರಿಗೇರಿ ಕ್ರಾಸ್ ಬಳಿಯ ಬಾಗೇವಾಡಿ (ಎಲ್ಎಲ್ಸಿ 70) ಉಪ ಕಾಲುವೆ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ಮೂಲ ವಿನ್ಯಾಸಕ್ಕಿಂತಲೂ ಬೇರೆಯದೇ ಆಗಿ ಈ ಉಪ ಕಾಲುವೆ ನವೀಕರಣ ಕಾರ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಉಪ ಕಾಲುವೆಯ ಮೂಲ ವಿನ್ಯಾಸ ಬದಲಿಸಿದ್ದಕ್ಕೆ ಈ ಭಾಗದ ನೂರಾರ ರೈತರ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರು ಆರೋಪಿಸುತ್ತಿರುವಂತೆ ಬಾಗೇವಾಡಿ ಉಪ ಕಾಲುವೆಯ ನವೀಕರಣ ಕಾರ್ಯ ಮೂಲ ವಿನ್ಯಾಸದಂತೆ ನಡೆಯುತ್ತಿಲ್ಲ. ಮೂಲ ವಿನ್ಯಾಸದಂತೆ ನಡೆದಿದ್ದರೆ ಅಂದಾಜು ಹತ್ತಾರು ಡಿಸ್ಟ್ರಿಬ್ಯೂಟರ್ ಪಾಯಿಂಟ್ಗಳನ್ನು ಹೊಂದಿರುವ ರೈತರ ಹೊಲಗಳಿಗೆ ಸರಾಗವಾಗಿ ನೀರು ಹರಿಯುತ್ತಿತ್ತು ಎಂದಿದ್ದಾರೆ.
ಬಾಗೇವಾಡಿ ಉಪ ಕಾಲುವೆ ಮೂಲ ವಿನ್ಯಾಸ ಬದಲು ಆರೋಪ ಡಿಸ್ಟ್ರಿಬ್ಯೂಟರ್ ಪಾಯಿಂಟ್ 18, 19, 20, 21, 22 ಸೇರಿದಂತೆ ಇತರೆ ಡಿಪಿಗಳ ವ್ಯಾಪ್ತಿಯ ಸಾವಿರಾರು ಎಕರೆಯ ಹೊಲಗಳಿಗೆ ಈ ಉಪ ಕಾಲುವೆ ನೀರು ಸರಾಗವಾಗಿ ಹರಿಯುತ್ತಿತ್ತು. ಇದರಿಂದ ಉತ್ತಮ ಬೆಳೆಯನ್ನೂ ಬೆಳೆಯಬಹುದಿತ್ತು. ತಾಲೂಕಿನ ದರೂರು, ಕರೂರು, ಹಾಗಲೂರು, ಹೊಸಳ್ಳಿ, ಚಾನಾಳ್ ಸೇರಿ ಇತರೆ ಗ್ರಾಮಗಳು ಇದರ ಲಾಭ ಪಡೆಯಲಿದ್ದವು ಎಂದು ವಿವರಿಸಿದ್ದಾರೆ.
ರೈತರಿಗೆ ಇಷ್ಟೆಲ್ಲಾ ಅನುಕೂಲ ಮಾಡಿಕೊಡುವ ಕಾಲುವೆ ಮೂಲ ವಿನ್ಯಾಸ ಬದಲಿಸಬಾರದು. ಉಪ ಕಾಲುವೆ ನೀರು ಈಗ ರಭಸವಾಗಿ ಹರಿಯುತ್ತಿದೆ. ಮೂಲ ವಿನ್ಯಾಸದಂತೆಯೆ ಉಪ ಕಾಲುವೆ ನವೀಕರಣ ಮಾಡೋದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಆದರೆ, ಕಾಂಕ್ರೀಟ್ ಹಾಕೋವರೆಗೂ ಯಾವುದೇ ಗ್ಯಾರಂಟಿ ಇಲ್ಲ ಎಂದು ಕರೂರು ಗ್ರಾಮದ ರೈತ ರಾಮನಗೌಡರು ಹೇಳಿದ್ದಾರೆ.
ಬಾಗೇವಾಡಿ ಉಪ ಕಾಲುವೆ ಉದ್ದ ಅಗಲ, ಆಳ ಬದಲಾಗಿದೆ. ಅದ್ದರಿಂದ ಡಿಪಿಗಳಿಗೆ ನೀರು ಹರಿಯುವ ಸಂಶಯ ನಮಗೆ ಮೂಡಿತ್ತು. ಈ ಮೊದಲು 18 ಅಡಿ ಉದ್ದ-ಅಗಲವಿತ್ತು. ಆದರೀಗ ಅದು 21 ಅಡಿ ಆಗಿದೆ. ಆಳವೂ ಜಾಸ್ತಿಯಾಗಲಿದೆ. ಹೀಗಾಗಿ, ಇತ್ತೀಚೆಗೆ ಎಲ್ಲ ರೈತರು ಒಗ್ಗೂಡಿ ಪ್ರತಿಭಟನೆ ನಡೆಸಿದೆವು. ಆಗ ಗುತ್ತಿಗೆದಾರ ಮೂಲ ವಿನ್ಯಾಸದಂತೆ ಉಪ ಕಾಲುವೆ ನವೀಕರಣ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ, ಕಾಂಕ್ರೀಟ್ ಹಂತ ತಲುಪಿದಾಗ ಮಾತ್ರ ಕಾಲುವೆಯ ನೈಜ ಚಿತ್ರಣ ಗೊತ್ತಾಗಲಿದೆ ಎಂದು ಹೆಚ್.ಹೊಸಳ್ಳಿ ರೈತ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.