ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣಕಲ್ಲು-ದೂಪದಹಳ್ಳಿ ಮಾರ್ಗದ ನಡುವೆ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ನಿವಾಸಿ ಸಿದ್ದೇಶ ಮೋರಿಗೇರಿ (21) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ತಾಲೂಕಿನ ಕಂದಗಲ್ ಗ್ರಾಮದ ಊರಮ್ಮದೇವಿ ಜಾತ್ರೆ ಮುಗಿಸಿಕೊಂಡು ಸ್ವಗ್ರಾಮದ ಕಡೆ ಬೈಕ್ನಲ್ಲಿ ಮೂರು ಮಂದಿ ಆಗಮಿಸುತ್ತಿದ್ದರು. ಹಗರಿಬೊಮ್ಮನಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ರಾಜೇಶ ಕರ್ತವ್ಯ ಮುಗಿಸಿಕೊಂಡು ಕೊಟ್ಟೂರಿಗೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ.
ಜಾತ್ರೆಯಿಂದ ಮರಳುತ್ತಿದ್ದ ಬೈಕ್ ಸವಾರ ಸಾವು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೊರಗೇರಿ ಸಿದ್ದೇಶ (21) ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬೈಕ್ ಮಧ್ಯೆ ಕುಳಿತಿದ್ದ ಕಡಲಬಾಳು ನಿವಾಸಿ ಈರಮ್ಮ(30), ಬೈಕ್ ಹಿಂದೆ ಕುಳಿತಿದ್ದ ಆನಂದ ದೇವನಹಳ್ಳಿಯ ಕೊಟ್ರೇಶ (19) ಇವರಿಬ್ಬರಿಗೂ ಗಂಭೀರ ಗಾಯಗಳಾಗಿವೆ. ಇಬ್ಬರಿಗೂ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.