ಬಳ್ಳಾರಿ : ವಿ.ಎಸ್.ಲಾಡ್ ಮೈನಿಂಗ್ ಕಂಪನಿಯ ಅದಿರು ವ್ಯವಹಾರಕ್ಕೆ ಸಂಬಂಧಿಸಿ ದಾಖಲೆಗಳನ್ನು ನೀಡುವಂತೆ ಮಾಜಿ ಶಾಸಕ ಅನಿಲ್ ಲಾಡ್, ಅವರ ಪತ್ನಿ ಹಾಗೂ ಕಂಪನಿಯ ನಿರ್ದೇಶಕಿ ಆರತಿ ಲಾಡ್ ಸೇರಿದಂತೆ ಹಲವರಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ. ಈ ಹಿಂದೆ 50 ಸಾವಿರ ಮೆಟ್ರಿಕ್ ಟನ್ ಒಳಗಿನ ರಫ್ತುದಾರರ ಮೇಲೆ ಬಂದ ಅಕ್ರಮ ಆರೋಪಗಳಿಗೆ ಸಂಬಂಧಿಸಿ ಎಸ್‌ಐಟಿ ತನಿಖೆ ಮಾಡಿತ್ತು.
ಅದೇ ರೀತಿ 50 ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಅದಿರನ್ನು ರಫ್ತು ಮಾಡಿದವರ ಪೈಕಿ ಆರೋಪಕ್ಕೊಳಗಾದ ಕಂಪನಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಈಗಾಗಲೇ ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಸಿಬಿಐ ಈ ಬಗ್ಗೆ ಚಾರ್ಜ್ಶೀಟ್ ಕೂಡ ಸಲ್ಲಿಸಿದೆ ಎಂಬ ಮಾಹಿತಿ ಇದೆ. ಇದರ ಜೊತೆಗೆ ಸಿಇಸಿ ನೀಡಿದ ವರದಿ ಆಧರಿಸಿ ವಿ.ಎಸ್.ಲಾಡ್ ಮೈನಿಂಗ್ ಕಂಪನಿಗೆ ಸೇರಿದ್ದ ಗಣಿ ಗುತ್ತಿಗೆಗಳು ಈಗಾಗಲೇ ಸಿ ಕೆಟಗರಿ ಎಂದು ಗುರುತಿಸಲಾಗಿದೆ.
ಸದರಿ ಗಣಿ ಗುತ್ತಿಗೆಯನ್ನು ಮರು ಹರಾಜು ಪ್ರಕ್ರಿಯೆಯಲ್ಲಿ ದೇಶದ ಪ್ರತಿಷ್ಠಿತ ಸ್ಟೀಲ್ ಹಾಗೂ ಅದಿರು ಕಂಪನಿಯಾದ ಜಿಂದಾಲ್ ಸ್ಟೀಲ್ಗೆ ಗುತ್ತಿಗೆ ದೊರಕಿದೆ. ಇಷ್ಟೆಲ್ಲ ನಡೆದಿದ್ದರೂ ಏಕಾಏಕಿ ಈಗ ಅಕ್ರಮ ಆರ್ಥಿಕ ವಹಿವಾಟು ಮತ್ತು ದಾಖಲೆ ರಹಿತ ಅಪಾರ ಪ್ರಮಾಣದ ಹಣ ವರ್ಗಾವಣೆ ಪ್ರಕರಣಗಳನ್ನು ತನಿಖೆ ಮಾಡುವ ಇಡಿ ಸಂಸ್ಥೆ ಸಮನ್ಸ್ ನೀಡಿರುವ ಲಾಡ್ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.
ಕಳೆದ 12 ವರ್ಷಗಳ ಹಿಂದೆಯೇ ವಿ.ಎಸ್.ಲಾಡ್ ಕಂಪನಿಯು ಅದಿರು ರಫ್ತು ಸ್ಥಗಿತಗೊಳಿಸಿದ್ದು, ಈಗ ಈ ಕಂಪನಿಗೆ ಸಂಬಂಧಿಸಿದಂತೆ ಇಡಿ ನೊಟೀಸ್ ನೀಡಿರುವುದು ಸಂಸ್ಥೆಯ ನಿರ್ದೇಶಕಿ ಆರತಿ ಲಾಡ್ ಅವರ ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಇತ್ತೀಚೆಗೆ ಸಂಡೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಮಾಜಿ ಶಾಸಕ ಅನಿಲ್ ಲಾಡ್ ಅವರು ಇಡಿ ಸಮನ್ಸ್ ನೀಡುವ ಮೂಲಕ ತಮ್ಮ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ:ಶಾಸಕ ಜಮೀರ್ ಬಂಗಲೆ ಎಸಿಬಿ ದಾಳಿ.. ಕಮೋಡ್, ವಾಶ್ ಬೇಸಿನ್, ಬಾತ್ ರೂಮ್ ಸೇರಿ ಇಂಚಿಂಚೂ ಶೋಧ