ಬಳ್ಳಾರಿ: ನಗರದ ದ್ವಾರಕಾ ನಂದಗೋಕುಲ ಹೆರಿಟೇಜ್ನಲ್ಲಿ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಹಾಗೂ ಸಂಜನಾ ಸಬರದ ವಿವಾಹ ಮಹೋತ್ಸವ ಇಂದು ಅದ್ಧೂರಿಯಾಗಿ ನೆರವೇರಿತು.
ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಅದ್ಧೂರಿ ವಿವಾಹೋತ್ಸವ ಕಾರ್ಯಕ್ರಮದಲ್ಲಿ ರಜಪೂತ ಸಂಪ್ರದಾಯದಂತೆ ಮದುವೆ ಕೈಂಕರ್ಯಗಳು ನೆರವೇರಿದವು. ಮದುವೆ ಮಂಟಪದಲ್ಲಿ ತಿರುಪತಿ ವೆಂಕಟೇಶ್ವರ ಪ್ರವೇಶದ್ವಾರದ ಶೈಲಿಯಲ್ಲಿ ಆಕರ್ಷಕ ಬಾಗಿಲುಗಳನ್ನು ಸಿದ್ದಪಡಿಸಲಾಗಿತ್ತು. ಮಂಟಪದಲ್ಲಿ ವೆಂಕಟೇಶ್ವರ ಮೂರ್ತಿ, ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನೀರಿನ ಕಾರಂಜಿ, ಶೋ ಆನೆಗಳು ಜನರನ್ನು ಸ್ವಾಗತಿಸಿದವು.
ಚುನಾವಣಾ ಆಯೋಗದ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಮದುವೆಯ ಘಟನಾವಳಿಗಳನ್ನು ಚಿತ್ರೀಕರಿಸಿದ್ದಾರೆ.
ಗಣ್ಯರ ಸಮಾಗಮ:
ಕಾನೂನು ಸಚಿವ ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಹಂಪಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ ಸಿಂಗ್, ಆರ್ಎಸ್ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್, ಶಾಸಕರಾದ ಸೋಮಶೇಖರ ರೆಡ್ಡಿ, ರಾಜುಗೌಡ, ಈ.ತುಕರಾಂ, ಬಿಜೆಪಿಯ ಚುನಾವಣಾ ಉಸ್ತುವಾರಿ ಎನ್.ರವಿಕುಮಾರ್, ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಬಿ.ಎಲ್.ರಾಣಿ ಸಂಯುಕ್ತಾ, ಶ್ರೀನಿವಾಸರೆಡ್ಡಿ, ಸಣ್ಣ ಫಕೀರಪ್ಪ ಸೇರಿ ಇತರರು ಭಾಗವಹಿಸಿದ್ದರು.