ಬೆಳಗಾವಿ: ದೂರದ ಊರಿನಿಂದ ಬರುವ ಶಾಲಾ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಮಳೆಯಲ್ಲೇ ಕಿತ್ತೂರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ತಮ್ಮ ಮಕ್ಕಳು ನಿತ್ಯ 7ಕಿ.ಮೀ. ನಡೆದೇ ಶಾಲೆಗೆ ಬರುತ್ತಾರೆ. ಮಳೆಗಾಲದಲ್ಲಂತೂ ಮಕ್ಕಳ ಪರಿಸ್ಥಿತಿ ಹೇಳತೀರದು. ಕೂಡಲೇ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ ಪೋಷಕರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಸ್ ವ್ಯವಸ್ಥೆ ಕಲ್ಪಿಸುವಂತೆ ಮಳೆಯಲ್ಲೇ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕಿತ್ತೂರಿನಿಂದ 7 ಕಿ.ಮೀ. ದೂರದ ಕುಲವಳ್ಳಿ, ಗಂಗ್ಯಾನಟ್ಟಿ, ಸಾಗರ, ಮಾಚಿ ಹಾಗೂ ಕತ್ರಿದಡ್ಡಿ ಮಾರ್ಗದಲ್ಲಿ ಬಸ್ ಸೌಲಭ್ಯ ಇಲ್ಲ. ಇಲ್ಲಿಂದ ಕಿತ್ತೂರಿನ ಶಾಲೆಗೆ ಬರಬೇಕು. ಬಸ್ ಸೌಲಭ್ಯ ಇಲ್ಲದ ಕಾರಣ ಎಳೆಯ ಮಕ್ಕಳು ನಿತ್ಯ ನಡೆದೇ ಶಾಲೆಗೆ ಬರುವ ದೌರ್ಭಾಗ್ಯ ಬಂದಿದೆ. ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾ ನಿರತರು ಪಟ್ಟು ಹಿಡಿದರು.
ದಿನಾಲೂ 7 ಕಿ.ಮೀ ನಡೆದು ಶಾಲೆಗೆ ಬರುವ ಮಕ್ಕಳು ಕಾಲುಗಳು ನೋವು ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ, ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ಹಾಜರಾತಿಯೂ ಕಡಿಮೆಯಾಗುತ್ತಿದೆ. ಯಾರೋ ಕೆಲವರು ಸೈಕಲ್ ಮೇಲೆ ಶಾಲೆಗೆ ಬರುತ್ತಾರೆ. ಮಳೆಗಾಲದಲ್ಲಿ ಶಾಲೆಗೆ ಬರವುದಕ್ಕೆ ಬಹಳಷ್ಟು ತೊಂದರೆ ಆಗುತ್ತಿದೆ. ಈ ಸಂಬಂಧ ಎರಡು ಬಾರಿ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.