ಬೆಳಗಾವಿ: ಕರ್ನಾಟಕದಲ್ಲಿಯೇ ಮೊದಲು ಜಾರಿಯಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 2021-22ನೇ ಶೈಕ್ಷಣಿಕ ವರ್ಷದಿಂದಲೇ ಅಳವಡಿಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ತಿಳಿಸಿದ್ದಾರೆ.
ರಾಣಿ ಚನ್ನಮ್ಮ ವಿವಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಕುಲಪತಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾಗತೀಕರಣೋತ್ತರದ ಸನ್ನಿವೇಶದಲ್ಲಿ ಶಿಕ್ಷಣದ ಪಾತ್ರ ಇನ್ನಷ್ಟು ಹೆಚ್ಚಾಗಿರುವುದರಿಂದ ಜ್ಞಾನ, ಉದ್ಯೋಗ ಮತ್ತು ಕೌಶಲಗಳನ್ನೊಳಗೊಂಡ ಸಮಗ್ರ ಶಿಕ್ಷಣ ನೀತಿಯ ಅವಶ್ಯಕತೆ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಜಾರಿಯಾಗಿರುವ ರಾಷ್ಟ್ರಿಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯ ಅನುಷ್ಠಾನಕ್ಕೆ ತಂದಿದ್ದು, ಅದೇ ಪ್ರಕಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇದೇ ಶೈಕ್ಷಣಿಕ ಸಾಲಿನಿಂದ ಪದವಿ ತರಗತಿಯ ಮೊದಲ ವರ್ಷ ಆರಂಭಗೊಳ್ಳಲಿವೆ ಎಂದರು.
ನೂತನ ಶಿಕ್ಷಣ ನೀತಿಗೆ ಪೂರಕವಾಗಿ ವಿಷಯವಾರು ಪಠ್ಯ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ. ಬಿಎ ಅಥವಾ ಬಿಎಸ್ಸಿ ಪದವಿ ಅಧ್ಯಯನಕ್ಕೆ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಎರಡು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಮೂರನೇ ವರ್ಷದ ಪ್ರಾರಂಭದಲ್ಲಿ ಒಂದು ವಿಷಯವನ್ನು ಮೇಜರ್ ಆಗಿ ಇನ್ನೊಂದನ್ನು ಮೈನರ್ ವಿಷಯವಾಗಿ ಅಥವಾ ಎರಡೂ ವಿಷಯಗಳನ್ನು ಮೇಜರ್ ಆಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ವಿದ್ಯಾರ್ಥಿಯು ಪ್ರಥಮ ವರ್ಷದಲ್ಲಿ ನಿಗದಿತ ಪಠ್ಯಕ್ರಮದಲ್ಲಿ ಅಧ್ಯಯನ ಮಾಡಿ ಅವಶ್ಯಕ ಅಂಕಗಳನ್ನು ಗಳಿಸಿ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಿದರೆ ಪ್ರಮಾಣಪತ್ರ ಮತ್ತು ದ್ವಿತೀಯ ವರ್ಷದಲ್ಲಿ ಡಿಪ್ಲೋಮಾ ಹಾಗೂ ಮೂರನೇ ವರ್ಷದ ಅಧ್ಯಯನ ಪೂರ್ಣಗೊಳಿಸಿ ನಿರ್ಗಮಿಸಿದರೆ ಸ್ನಾತಕ ಪದವಿ ನೀಡಲಾಗುತ್ತದೆ. ಹೀಗೆ ಅನೇಕ ಕಾರಣಗಳಿಂದ ರಾಷ್ಟ್ರೀಯ ಶಿಕ್ಷಣ ನೀತಿ ಭವಿಷ್ಯದ ವಿದ್ಯಾರ್ಥಿಗಳಲ್ಲಿ ಜ್ಞಾನ, ಉದ್ಯೋಗ ಮತ್ತು ಕೌಶಲಗಳನ್ನು ಬೆಳೆಸಲಿದೆ. ಈ ಮೂಲಕ ಹೊಸ ಪೀಳಿಗೆಯನ್ನು ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜನೈತಿಕವಾಗಿ ರೂಪಗೊಳಿಸಲು ಸಹಕಾರಿಯಾಗಲಿದೆ ಎಂದರು.
ಹೊಸ ಸ್ವರೂಪದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ 398 ಮಹಾವಿದ್ಯಾಲಯಗಳಲ್ಲಿ ಏಕ ಕಾಲಕ್ಕೆ ಜಾರಿಗೆ ಬರಲಿದೆ. ಯುಯುಸಿಎಂಎಸ್ ಮೂಲಕ ಪ್ರವೇಶಾತಿ ಪ್ರಕ್ರಿಯೆ ಮಂಗಳವಾರದಿಂದಲೇ ಆರಂಭಗೊಳ್ಳುತ್ತಿದೆ ಎಂದು ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಮಾಹಿತಿ ನೀಡಿದರು.