ಅಥಣಿ(ಬೆಳಗಾವಿ):ಅಥಣಿಯನ್ನು 32ನೇಯ ಜಿಲ್ಲೆಯಾಗಿ ಘೋಷಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಥಣಿ ಜನರು 7,000 ಪತ್ರ ಬರೆದು ಈ ಭಾಗದ ಜನರು ಪತ್ರ ಚಳವಳಿಗೆ ಮುಂದಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ಪಟ್ಟಣ ಅತಿ ವಿಸ್ತಾರವಾಗಿ ಹಾಗೂ ಬೆಳಗಾವಿ ನಗರದಿಂದ ಅತಿ ದೂರ ಇರುವುದರಿಂದ ಮತ್ತು ಆಡಳಿತ ದೃಷ್ಟಿ ಹಿನ್ನೆಲೆ ಅಥಣಿಯನ್ನು ಪ್ರತ್ಯೇಕ ಜಿಲ್ಲೆಯೆಂದು ಘೋಷಿಸುವಂತೆ ಎಂದು ಅಥಣಿ ಜಿಲ್ಲಾ ಹೋರಾಟ ಸಮಿತಿಯಿಂದ ಮತ್ತೊಮ್ಮೆ ಮುಖ್ಯಮಂತ್ರಿ ಅವರಿಗೆ 7 ಸಾವಿರ ಪತ್ರಗಳನ್ನು ಬರೆಯಲಾಗಿದೆ. ಸ್ಥಳೀಯ ಶೆಟ್ಟರಮಠದ ಆವರಣದಲ್ಲಿ ಅಥಣಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಮಾಧ್ಯಮಗೋಷ್ಠಿ ಕರೆದು ಹಲವು ಮುಖಂಡರು, ಹೋರಾಟಗಾರರು 'ಈಟಿವಿ ಭಾರತ'ದೊಂದಿಗೆ ಮಾತನಾಡಿದರು.
ಅಥಣಿಯನ್ನು ಜಿಲ್ಲೆಯೆಂದು ಘೋಷಿಸುವಂತೆ ಒತ್ತಾಯ ಶೆಟ್ಟರಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಮಾತನಾಡಿ, ರಾಜಕೀಯ ಹಿತಾಸಕ್ತಿಯ ಕೊರತೆಯಿಂದ ಅಥಣಿಗೆ ಜಿಲ್ಲೆಯಾಗುವ ಅರ್ಹತೆ ಇದ್ದರೂ ಕೂಡ ಈವರೆಗೂ ತಾಲೂಕಾಗಿಯೇ ಉಳಿದಿರುವುದು ವಿಷಾದನೀಯ ಸಂಗತಿ. ಹಾಗಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ತಾಲೂಕಿನಿಂದ ಸುಮಾರು 7,000 ಪತ್ರಗಳನ್ನು ಕಳುಹಿಸಿ ಅಥಣಿಯನ್ನು ಜಿಲ್ಲೆಯನ್ನಾಗಿಸಿ ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ನಮ್ಮ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಅಥಣಿ ಜನತೆ ಅಥಣಿಯನ್ನು ಜಿಲ್ಲೆಯನ್ನಾಗಿಸುವ ವಿಷಯದಲ್ಲಿ ಏಕೆ ಮೌನವಾಗಿದ್ದಾರೆಂಬುದು ತಿಳಿಯುತ್ತಿಲ್ಲ. ಕೂಡಲೇ ಸಮಸ್ತ ಜನತೆ ಹಾಗೂ ಚುನಾಯಿತ ಪ್ರತಿನಿಧಿಗಳು ಕೈಜೋಡಿಸಿ ಉತ್ಸಾಹದಿಂದ ಅಥಣಿಯನ್ನು ಜಿಲ್ಲೆಯನ್ನಾಗಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳೋಣ ಎಂದು ಕರೆ ನೀಡಿದರು.
ಅಥಣಿ ಜಿಲ್ಲೆಯಾದರೆ ಗಡಿ ಭಾಗದಲ್ಲಿ ಕನ್ನಡದ ಭದ್ರ ಕೋಟೆಯಾಗುತ್ತದೆ. ನಮ್ಮ ಭಾಗದ ಬಡಜನತೆ ಶಿಕ್ಷಣಕ್ಕಾಗಿ, ವೈದ್ಯಕೀಯ ಸೇವೆ, ಕೆಲಸಕ್ಕಾಗಿ ಇತರೆಡೆಗೆ ವಲಸೆ ಹೋಗುವುದನ್ನು ತಡೆಯಬಹುದು. ಅದಕ್ಕಾಗಿ ಅಥಣಿ ಜಿಲ್ಲೆಯಾಗಬೇಕು ಎಂದು ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ ಹೇಳಿದರು.
ಬಳಿಕ ಮಾತನಾಡಿದ ಹಿರಿಯ ಮುಖಂಡ ಅರುಣ್ ಯಲಗುದ್ರಿ, ಅಥಣಿ ತಾಲೂಕಿನ ಪೂರ್ವ ಭಾಗದಿಂದ ಪಶ್ಚಿಮ ಭಾಗಕ್ಕೆ ಹೋಗಬೇಕಾದರೆ 151 ಕಿ.ಮೀ ದೂರವಿದೆ. ಅವಿಭಜಿತ ಅಥಣಿ ತಾಲೂಕು ಸುಮಾರು 2070.54 ಚ. ಕಿ.ಮೀ ವ್ಯಾಪ್ತಿ ಹೊಂದುವ ಮೂಲಕ ಅತಿ ದೊಡ್ಡ ತಾಲೂಕಾಗಿದೆ. ಬೆಂಗಳೂರು ಭಾಗದ ಜಿಲ್ಲೆಗಳು ಹೊಂದಿರುವಷ್ಟು ವ್ಯಾಪ್ತಿಯನ್ನು ಹೊಂದಿದೆ. ದಕ್ಷಿಣ ಭಾಗದವರು ನಮ್ಮ ಉತ್ತರ ಕರ್ನಾಟಕದ ಹಲವು ಭಾಗಗಳನ್ನು ದೂರ ಇಡುತ್ತಲೇ ಬಂದಿರುವುದರಿಂದ ನಾವು ಇನ್ನೂ ಅವರಿಗಿಂತ ಹಿಂದುಳಿದಿದ್ದೇವೆ. ನಮ್ಮ ತಾಲೂಕಿನ ಕೊನೆಯ ಗ್ರಾಮ ಕೊಟ್ಟಲಗಿಯಿಂದ ಜಿಲ್ಲಾಸ್ಥಳ ಬೆಳಗಾವಿಗೆ ಹೋಗಬೇಕಾದರೆ ಸುಮಾರು 200 ಕಿ.ಮೀ ದೂರವಾಗುತ್ತದೆ. ಅಲ್ಲಿಗೆ ಹೋಗಿ ಏನಾದರು ಕೆಲಸ ಮಾಡಿಕೊಂಡು ಬರಬೇಕಾದರೆ ಪೂರ್ಣ ಒಂದು ದಿನ ಕಳೆದು ಹೋಗುತ್ತದೆ. ಹೀಗಾದರೆ ಬಡವರ ಕಥೆ ಏನು ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಬಿಜೆಪಿಯವರು ನನ್ನ ಸಂಪರ್ಕದಲ್ಲಿದ್ದಾರೆ : ಲಕ್ಷ್ಮಿ ಹೆಬ್ಬಾಳ್ಕರ್ ಬಾಂಬ್
ಅಥಣಿ ಭಾಗದ ಜನಪ್ರತಿನಿಧಿಗಳ ದಿವ್ಯ ಮೌನದಿಂದ ಅಥಣಿಯು ಜಿಲ್ಲೆಯಾಗುವ ಅರ್ಹತೆ ಹೊಂದಿದ್ದರೂ ಸಹ ಈವರೆಗೂ ಜಿಲ್ಲೆಯಾಗಿಲ್ಲ. ಕೂಡಲೇ ಅಥಣಿಯನ್ನು ಕರ್ನಾಟಕದ 32ನೇಯ ಜಿಲ್ಲೆಯನ್ನಾಗಿಸಿ. ಜಿಲ್ಲಾ ಘೋಷಣೆಗೆ ಬೇಕಾದ ಅರ್ಹತೆ ಅಥಣಿ ಹೊಂದಿರುವ ಕಾರಣಕ್ಕೆ ಇದು ನಮ್ಮ ಹಕ್ಕೊತ್ತಾಯವಾಗಿದೆ ಎಂದು ಪ್ರಾಧ್ಯಾಪಕ ದೇವೆಂದ್ರ ಬಿಸ್ವಾಗರ ಹೇಳಿದರು.