ಬೆಳಗಾವಿ:ರಾಜ್ಯದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸದ್ದು ಮಾಡ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲಾ. ಅದು ಕೊಲೆ. ಗಂಡನ ಸಾವಿಗೆ ಕಾರಣವಾದ ಈಶ್ವರಪ್ಪನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಮೃತ ಸಂತೋಷ್ ಪತ್ನಿ ಜಯಶ್ರೀ ಪಾಟೀಲ್ ಆಗ್ರಹಿಸಿದ್ದಾರೆ.
ನಗರದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಈಶ್ವರಪ್ಪ ಅವರು ಕೇಳಿರುವ ಕಮಿಷನ್ ಬಗ್ಗೆ ನನ್ನ ಪತಿ ನನ್ನ ಮುಂದೆ ಹೇಳಿಕೊಂಡಿದ್ರು. 4 ಕೋಟಿ ಕಾಮಗಾರಿ ಮಾಡಿದ್ದೇನಿ. ಈಶ್ವರಪ್ಪ ಶೇ. 40ರಷ್ಟು ಕಮಿಷಿನ್ ಕೇಳುತ್ತಿದ್ದಾರೆ ಅಂತಾ ಹೇಳಿಕೊಂಡಿದ್ದರು ಎಂಬುದನ್ನು ಜಯಶ್ರೀ ಪಾಟೀಲ್ ತಿಳಿಸಿದ್ದಾರೆ.
ಅವರಿಗೆ ನಾನು ಶೇ. 40ರಷ್ಟು ಕಮಿಷನ್ ಕೊಟ್ರೆ ನಾನು ಸಂಪೂರ್ಣ ಹಾಳಾಗ್ತೇನಿ. ನನ್ನ ಮೈಮೇಲೆ ಇದ್ದ ಬಂಗಾರ ಅಡವಿಟ್ಟು 108 ಕಾಮಗಾರಿ ಮಾಡಿಸಿದ್ರು. ಬಿಲ್ ಬಂದ್ಮೇಲೆ ಬಂಗಾರ ಆಭರಣಗಳನ್ನ ಬಿಡಿಸಿ ಕೊಡ್ತಿನಿ ಅಂತಾ ಹೇಳಿದ್ರು. ಆತ್ಮಹತ್ಯೆಗೂ ಮುನ್ನ ಸಂಜೆ ಏಳು ಗಂಟೆಗೆ ನನ್ನ ಮತ್ತು ಮಗನ ಜೊತೆಗೆ ಚೆನ್ನಾಗಿಯೇ ಮಾತನಾಡಿದ್ರು. ನೆಟ್ವರ್ಕ್ ಬರ್ತಿಲ್ಲ, ಬೆಳಗ್ಗೆ ಮಾತನಾಡ್ತೇನಿ ಅಂತಾ ಹೇಳಿದ್ರು. ನನ್ನ ಜೊತೆಗೆ ನಗು ನಗುತ್ತಲೇ ಮಾತನಾಡಿದ್ದರು. ಬೆಳಗ್ಗೆ ಫೋನ್ ಮಾಡಿದ್ರೆ ಫೋನ್ ರಿಸಿವ್ ಮಾಡಿರಲಿಲ್ಲ. ಬೇರೆಯವರು ಮೂಲಕ ವಿಷಯ ಗೊತ್ತಾಯ್ತು ಎಂದು ಕಣ್ಣೀರು ಹಾಕಿದ್ರು.