ಅಥಣಿ:ಸಿಂದಗಿ ಹಾಗು ಹಾನಗಲ್ ಉಪಚುನಾವಣೆ ಫಲಿತಾಂಶ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಅಥಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅಲ್ಪಮತಗಳಿಂದ ಸೋತಿದ್ದಾರೆ. ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಅದೇ ರೀತಿ, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಅವರು 30 ಸಾವಿರ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ರಚನೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಹಾನಗಲ್ ಉಪಚುನಾವಣೆ ಸೋಲಿಗೆ ಕಾರಣ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಟಳ್ಳಿ, ಬೆಲೆ ಏರಿಕೆ ಇವತ್ತಿನಿಂದ ಆಗುತ್ತಿಲ್ಲ. ಕಳೆದ 60 ವರ್ಷಗಳಿಂದ ಬೆಲೆ ಏರಿಕೆಯಾಗುತ್ತಿದೆ. ದಿನಕಳೆದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಆಗುತ್ತಿದೆ. ನಾನು ಚಿಕ್ಕವನಿದ್ದಾಗ 10 ಪೈಸೆ ಹಣ ಚಲಾವಣೆಯಲ್ಲಿತ್ತು. ಆದರೆ ಸದ್ಯ ಹತ್ತು, ಇಪ್ಪತ್ತು ಪೈಸೆಗಳು ಚಲಾವಣೆ ಆಗುತ್ತಿಲ್ಲ. ದಿನ ಕಳೆದಂತೆ ದರ ಏರಿಕೆ ಆಗುತ್ತಿದೆ. ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆೆಯಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.