ಬೆಳಗಾವಿ: ಕೆಎಲ್ಇ ಸಂಸ್ಥೆಯ ಎಲ್ಲ 15 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ನೂತನ ಅಧ್ಯಕ್ಷರಾಗಿದ್ದಾರೆ.
ಈ ಮೊದಲು ಮಾಜಿ ಸಚಿವ ಶಿವಾನಂದ ಕೌಜಲಗಿ ಸಂಸ್ಥೆಯ ಅಧ್ಯಕ್ಷರಾಗಿ 30 ವರ್ಷ ಸೇವೆ ಸಲ್ಲಿಸಿದ್ದರು. ಈಗ ಅವರ ಪುತ್ರ ಮಹಾಂತೇಶ ಕೌಜಲಗಿ ಕೆಎಲ್ಇ ಸಂಸ್ಥೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಉಪಾಧ್ಯಕ್ಷರಾಗಿ ರಾಜೇಂದ್ರ ಹಂಜಿ ಮತ್ತು ಬಸವರಾಜ ತಟವಟಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಕಾರ್ಯಾಧ್ಯಕ್ಷರ ಆಯ್ಕೆ ಮಾರ್ಚ್ ತಿಂಗಳಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ನಡೆಯಲಿದ್ದು, ಡಾ. ಪ್ರಭಾಕರ ಕೋರೆ ಅವರು ಕಾರ್ಯಾಧ್ಯಕ್ಷರಾಗಿ ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ಕೆಎಲ್ಇ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶಾಸಕ ಮಹಾಂತೇಶ ಕೌಜಲಗಿ ಆಯ್ಕೆ ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು, ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರ ಆಯ್ಕೆ ಅವಿರೋಧವಾಗಿದೆ. ಹೀಗಾಗಿ ಫೆಬ್ರುವರಿ 29 ರಂದು ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ಆವರಣ ಮತ್ತು ಮಾಚ್ 1 ರಂದು ಬೆಳಗಾವಿಯ ಲಿಂಗರಾಜ ಕಾಲೇಜು ಆವರಣದಲ್ಲಿ ನಡೆಯಬೇಕಿದ್ದ ಚುನಾವಣೆ ರದ್ದುಪಡಿಸಲಾಗಿದೆ.
ಪ್ರಭಾಕರ ಕೋರೆ ಸೇರಿದಂತೆ ಪ್ರವೀಣ ಬಾಗೇವಾಡಿ, ಮಹಾಂತೇಶ ಕವಟಗಿಮಠ, ಅಮಿತ ಕೋರೆ, ಶ್ರೀಶೈಲಪ್ಪ ಮೆಟಗುಡ್, ಜಯಾನಂದ ಮುನವಳ್ಳಿ, ಶಂಕರಣ್ಣ ಮುನವಳ್ಳಿ, ಬಸವರಾಜ ಪಾಟೀಲ, ವಿಶ್ವನಾಥ ಪಾಟೀಲ, ಯಲ್ಲನಗೌಡ ಪಾಟೀಲ, ಅನಿಲ ಪಟ್ಟೇದ ಮತ್ತು ವಿರುಪಾಕ್ಷಿ ಸಾಧುನವರ ಅವಿರೋಧ ಆಯ್ಕೆಯಾಗಿದ್ದಾರೆ. ಕೆ.ಎಲ್.ಇ ಸಂಸ್ಥೆಯು ಸುಮಾರು 9,000 ಸದಸ್ಯರಿದ್ದಾರೆ.
ಸಂಸ್ಥೆಯು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ 270 ಕ್ಕೂ ಅಧಿಕ ಸಂಸ್ಥೆಗಳನ್ನು ನಡೆಸುತ್ತಿದ್ದು, 1.25 ಲಕ್ಷ ವಿದ್ಯಾಥಿ೯ಗಳು ಸಂಸ್ಥೆಯ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಸುಮಾರು 16,000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.