ಬೆಳಗಾವಿ: ಪಕ್ಷ ಸಂಘಟನೆ ದೃಷ್ಟಿಯಿಂದ ಬೆಳಗಾವಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಬಣ ರಾಜಕೀಯ ಇರುವುದು ನಿಜ. ಇದಕ್ಕೆ ನಾನೇನು ಪ್ರತಿಕ್ರಿಯೆ ನೀಡಲ್ಲ. ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ಪ್ರತ್ಯೇಕಿಸಬೇಕು. ವಿಭಾಗೀಯ ಕಚೇರಿ ಇರುವ ಬೈಲಹೊಂಗಲ, ಚಿಕ್ಕೋಡಿ, ಬೆಳಗಾವಿ ಜಿಲ್ಲೆಯಾಗಬೇಕು. ಎಸಿ ಕಚೇರಿ ಇರುವ ನಗರಗಳೇ ಜಿಲ್ಲಾ ಕೇಂದ್ರವಾಗಬೇಕು ಎಂಬ ಅನಿಸಿಕೆ ನನ್ನದು ಎಂದು ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾ ವಿಭಜನೆ ಹೋರಾಟದ ನೇತೃತ್ವ ನಾನೇ ವಹಿಸಿಕೊಳ್ಳುತ್ತೇನೆ. ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂಬುದು ಸರ್ಕಾರಕ್ಕೂ ಗೊತ್ತಿದೆ. ನಾನು ಜಿಲ್ಲೆಯ ನಾಯಕನಾಗಿದ್ದು, ಜನರ ನಾಡಿಮಿಡಿತ ಗೊತ್ತಿದೆ. ಜೆ.ಎಚ್. ಪಾಟೀಲ ಅವರು ಸಿಎಂ ಆಗಿದ್ದಾಗ ಜಿಲ್ಲೆಯನ್ನು ಪ್ರತ್ಯೇಕ ಮಾಡಲು ನಿರ್ಧರಿಸಲಾಗಿತ್ತು. ಆದರೆ ಎಂಇಎಸ್ ಪ್ರಭಾವದಿಂದ ಆಗ ಜಿಲ್ಲಾ ವಿಭಜನೆ ಆಗಿರಲಿಲ್ಲ. ಈಗ ಎಂಇಎಸ್ ಪ್ರಭಾವ ಕುಗ್ಗಿದೆ, ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ವಿಭಜನೆ ಆಗಬೇಕು. ತಕ್ಷಣವೇ ಜಿಲ್ಲಾ ವಿಭಜನೆ ಆಗಬೇಕು ಎಂಬುದು ನಮ್ಮ ಹೋರಾಟ. ಇದಕ್ಕಾಗಿ ಪಕ್ಷಾತೀತವಾಗಿ ನಿಯೋಗವನ್ನು ಸಿಎಂ ಬಳಿ ಕೊಂಡೊಯ್ಯುವೆ ಎಂದರು.