ಬೆಂಗಳೂರು:ರಾಜ್ಯ ಕಂಡ ಅಪರೂಪದ ರಾಜಕಾರಣಿ, ಜನತಾ ಪರಿವಾರ ಮೂಲದ ಹಿರಿಯ ಮುತ್ಸದ್ಧಿ ಉಮೇಶ್ ಕತ್ತಿ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಜನಪರ ಧ್ವನಿಯೂ ನಿಂತುಹೋಗಿದೆ.
1961ರ ಮಾರ್ಚ್ 14 ರಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಜನಿಸಿದರು. ತಂದೆ ವಿಶ್ವನಾಥ್ ಕತ್ತಿ ಅವರ ಅಕಾಲಿಕ ನಿಧನದಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಖಾಲಿಯಾಗಿತ್ತು. 1985ರಲ್ಲಿ ಉಮೇಶ್ ಕತ್ತಿ, ಜನತಾ ಪಕ್ಷದಿಂದ ಶಾಸಕರಾಗಿ ವಿಧಾನಸಭಾ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದರು. ನಂತರ ರಾಜಕೀಯ ಕ್ಷೇತ್ರದಲ್ಲಿ ಹೊಸ ಹೊಸ ಎತ್ತರಕ್ಕೆ ಬೆಳೆದು ನಿಂತರು. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಜೊತೆಗೆ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖಂಡರಾಗಿಯೂ ಗುರುತಿಸಿಕೊಳ್ಳುತ್ತಾರೆ. ಜನತಾದಳ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಹಿರಿಮೆ ಇವರದ್ದು.
1. 9 ಬಾರಿ ಸ್ಪರ್ಧೆ, 8 ಸಲ ಶಾಸಕ: ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ 9 ಬಾರಿ ಸ್ಪರ್ಧಿಸಿದ್ದ ಕತ್ತಿ, ಪ್ರಸಕ್ತ ಅವಧಿಯೂ ಸೇರಿದಂತೆ ಎಂಟು ಬಾರಿ ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿ ಕೇವಲ 800 ಮತಗಳ ಅಂತರದಿಂದ ಸೋಲಿನ ಕಹಿ ಅನುಭವಿಸಿದ್ದರು. ಜನಸಂಖ್ಯೆಗೆ ಅನುಗುಣವಾಗಿ ಕರ್ನಾಟಕವನ್ನು ಮೂರು ರಾಜ್ಯಗಳಾಗಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗ ಸಭೆಯಲ್ಲಿ ಹೇಳಿ ಗಮನ ಸೆಳೆದಿದ್ದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಆಗಾಗ ಧ್ವನಿ ಎತ್ತುತ್ತಿದ್ದ ಕತ್ತಿ ವಿಶೇಷ ಕಾರಣದಿಂದ ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ.
2. ಉಮೇಶ್ ಕತ್ತಿ ರಾಜಕೀಯ ಹಾದಿ ಹೀಗಿತ್ತು:
1985 ರಲ್ಲಿ ಮೊದಲ ಬಾರಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆ
1989 ರಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆ
1994 ರಲ್ಲಿ ಮೂರನೇ ಬಾರಿ ಆಯ್ಕೆ
1999 ರಲ್ಲಿ ಸಂಯುಕ್ತ ಜನತಾದಳದಿಂದ ಆಯ್ಕೆ, ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶ
2004 ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಮೊದಲ ಬಾರಿ ಸೋಲು
2008 ರಲ್ಲಿ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿ ಗೆಲುವು, ಐದನೇ ಬಾರಿ ಶಾಸನಸಭೆ ಪ್ರವೇಶ
2008 ರಲ್ಲಿ ಆಪರೇಷನ್ ಕಮಲಕ್ಕೆ ಸಿಲುಕಿ ಜೆಡಿಎಸ್ಗೆ ರಾಜೀನಾಮೆ, ಬಿಜೆಪಿಯಿಂದ ಸ್ಪರ್ಧೆ, ಉಪಚುನಾವಣೆಯಲ್ಲಿ ಗೆಲುವು
2013 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು, ಏಳನೇ ಬಾರಿ ವಿಧಾನಸಭೆ ಪ್ರವೇಶ
2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎಂಟನೇ ಬಾರಿ ಗೆದ್ದು ಶಾಸಕರಾಗಿ ಆಯ್ಕೆ